ಪುತ್ತೂರು, ಆ 14 (Daijiworld News/MSP): ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯದಲ್ಲಿ ಖಾಸಗಿ ಬಸ್ಸು ಮತ್ತು ಕಾರೊಂದರ ಮಧ್ಯೆ ಅಪಘಾತ ಸಂಭವಿಸಿ ಕಾರು ಚಾಲಕ ಮೃತಪಟ್ಟ ಘಟನೆಗೆ ಸಂದರ್ಭ ಬಸ್ಸಿಗೆ ಕಲ್ಲುತೂರಾಟ ನಡೆಸಿ ಹಾನಿ ಉಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಬಕ ನಿವಾಸಿಗಳಾದ ಸಿದ್ದೀಕ್ (33) ಕೆ.ಹಂಝ (38) ಅಬೀಬ್ ಫೈಸಲ್ (29),ಅಬ್ದುಲ್ ಸಮೀರ್ (30) ಮತ್ತು ಕೊಡಿಪ್ಪಾಡಿ ನಿವಾಸಿ ಇಸ್ಮಾಯಿಲ್(23) ಎಂದು ಗುರುತಿಸಲಾಗಿದೆ.
ಆ.12ರಂದು ಪೋಳ್ಯದಲ್ಲಿ ಖಾಸಗಿ ಕಾರು ಮತ್ತು ಬಸ್ ನ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಬಡಗನ್ನೂರು ಮುಂಡೋಳೆ ಅಬ್ದುಲ್ ಹಕೀಂ ಎಂಬವರು ಮೃತಪಟ್ಟಿದ್ದರು. ಖಾಸಗಿ ಬಸ್ಸಿನ ಚಾಲಕ ಕೆಎಸ್ಆರ್ಟಿಸಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಕೆಲವರು ಬಸ್ಸಿಗೆ ಕಲ್ಲು ತೂರಾಟ ನಡೆಸಿ ಹಾನಿ ಉಂಟು ಮಾಡಿದ್ದರು. ಇದರಿಂದ ಬಸ್ಸಿಗೆ ಸುಮಾರು ೬೦ ಸಾವಿರದಷ್ಟು ನಷ್ಟ ಉಂಟಾಗಿದೆ ಎಂದು ಬಸ್ಸಿನ ಮಾಲಕ ಸುದೇಶ್ಚಂದ್ರ ರೈ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಐವರನ್ನು ಬಂಧಿಸಿದ್ದಾರೆ.