ಬೆಳ್ತಂಗಡಿ, ಅ 15 (Daijiworld News/MSP): ಪ್ರಕೃತಿ ಸೊಬಗಿನ ಚಾರ್ಮಾಡಿ ಘಾಟ್ನಲ್ಲಿನ ರಸ್ತೆ ಸಂಪೂರ್ಣ ಬಿಗಡಾಯಿಸಿದ್ದು ಸೆ ೧೪ ರವರೆಗೆ ಸಂಚಾರ ನಿರ್ಬಂಧಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.
ಕಳೆದ ವರ್ಷದ ವರ್ಷಾಧಾರೆಗೆ ಘಾಟಿಯಲ್ಲಿನ ಧರೆಗಳು ಅಲ್ಲಲ್ಲಿ ಕುಸಿದಿದ್ದವು. ಮಧ್ಯೆ ಮಧ್ಯೆ ದುರುಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಈ ಬಾರಿಯ ಭೂ ಸ್ಖಲನದ ಪರಿಣಾಮ ಹಲವಾರು ತಿರುವುಗಳು ಭಯಾನಕವಾಗಿ ಅಪಾಯಕರವಾಗಿ ಮಾರ್ಪಾಡಾಗಿವೆ.
ಮಂಗಳೂರು ವಿಲ್ಲುಪುರಂ 73 ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿಯ 76 ಕಿ.ಮಿ ನಿಂದ 86.7 (ಚಾರ್ಮಾಡಿ ಘಾಟ್ ಪ್ರದೇಶ) ಪ್ರಸ್ತುತ ಸಂಚಾರಕ್ಕೆ ಯೋಗ್ಯವಿಲ್ಲ, ಈ ರಸ್ತೆಯ ಬದಲಾಗಿ ಉಜಿರೆ-ದರ್ಮಸ್ಥಳ- ಕೊಕ್ಕಡ-ಗುಂಡ್ಯ- ಶಿರಾಡಿ(ರಾ.ಹೆ 75)ರ ಮೂಲಕ ಪರ್ಯಾಯ ಮಾರ್ಗವಾಗಿ ಸಂಚರಿಸಬಹುದು. ಚಿಕ್ಕಮಗಳೂರು ಜಿಲ್ಲೆಯಿಂದ ಮೂಡುಗೆರೆ ಹ್ಯಾಂಡ್ಪೋಸ್ಟ್- ಆನೆಮಹಲ್- ಶಿರಾಡಿ- ಗುಂಡ್ಯಮೂಲಕವೂ ಪರ್ಯಾಯ ಮಾರ್ಗ ಬಳಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಏನಿದ್ದರೂ ಘಾಟಿ ರಸ್ತೆಯನ್ನು ಮತ್ತೆ ಸಂಚಾರ ಯೋಗ್ಯವನ್ನಾಗಿ ಮಾಡುವ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯವರು ಹೊಸ ರಸ್ರೆ ನಿರ್ಮಾಣ, ಹಲವೆಡೆ ದುರಸ್ತಿ, ಬಂಡೆ ತೆರವು ಕಾರ್ಯವನ್ನು ತ್ವರಿತವಾಗಿ ನಡೆಸುತ್ತಿದ್ದಾರೆ. 8 ಕ್ಕೂ ಹೆಚ್ಚು ಜೇಸಿಬಿಗಳು ಕಾರ್ಯಪ್ರವೃತ್ತವಾಗಿವೆ. ದ.ಕ.ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ಗಳು ರಸ್ತೆಯ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ್ದಾರೆ. 1 ತಿಂಗಳ ನಂತರ ಸಂಚಾರಕ್ಕೆ ಮುಕ್ತವಾಗಬಹುದು ಎಂದು ಅಂದಾಜಿಸಲಾಗಿದೆ.
ಚಾರ್ಮಾಡಿ ಘಾಟ್ ನಲ್ಲಿ ಹಲವು ವರ್ಷಗಳ ಹಿಂದೆ, ವಿದೇಶಿ ತಂತ್ರಜ್ಞಾನ ಬಳಿಸಿ ವಿಶೇಷ ವಿನ್ಯಾಸದ ತಡೆಗೋಡೆಗಳನ್ನು ರಚಿಸಲಾಗಿತ್ತು. ಇದರಿಂದ ಕೆಲ ವರ್ಷ ಘಾಟಿ ಪ್ರದೇಶದಲ್ಲಿ ಗುಡ್ಡ ಜರಿತ ಕಡಿಮೆಯಾಗಿತ್ತು. ಆದರೆ ಕಳೆದ ಮಳೆಗಾಲದಲ್ಲಿ ಅಲ್ಲಲ್ಲಿ ಸ್ವಲ್ಪ ಸ್ವಲ್ಪವೇ ಜರಿತ ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಗುಡ್ಡ ಜರಿತ ವಿಕೋಪಕ್ಕೆ ತಿರುಗಿದೆ. ಕೆಲವು ತಜ್ಞರ ಪ್ರಕಾರ ಇನ್ನು ಅದನ್ನು ಮತ್ತೆ ಸರಿಮಾಡಲು ಏನೇ ಪ್ರಯತ್ನಪಟ್ಟರು ಕೋಟಿ ಕೋಟಿ ದುಡ್ಡು ನಷ್ಟವೇ ಹೊರತು ಬೇರೆ ಏನೂ ಆಗದು ಎಂದು ಅಭಿಪ್ರಾಯಪಡುತ್ತಾರೆ.
ಚಾರ್ಮಾಡಿ ಘಾಟಿ ರಸ್ತೆಯನ್ನು ಮತ್ತೆ ಹಳಿಗೆ ತರಲು ಶಾಸಕಾಂಗ ಮತ್ತು ಕಾರ್ಯಾಂಗ ಈಗಾಗಲೇ ಕೋಟಿ ಕೋಟಿಯ ಲೆಕ್ಕ ಹಾಕತೊಡಗಿದೆ ಎಂದು ಹೇಳಲಾಗುತ್ತಿದೆ. ಹೊಸ ನಮೂನೆಯ ತಾಂತ್ರಿಕತೆಯಿಂದ ಮತ್ತೆ ಅದನ್ನು ನಿರ್ಮಿಸಲು ಸಿದ್ದವಾಗತೊಡಗಿದ್ದಾರೆ. ಇದರಿಂದ ಮತ್ತೆ ಆ ಅರಣ್ಯ ಪ್ರದೇಶದಲ್ಲಿ ಬೃಹತ್ ಜೆಸಿಬಿಗಳ ಆರ್ಭಟ, ನವೀನ ಯಂತ್ರೋಪಕರಣಗಳ ಚಲನವಲನ ಇತ್ಯಾದಿಗಳಿಂದ ಘಾಟಿ ಮತ್ತೆ ದುರ್ಬಲಗೊಳ್ಳುವುದು ನಿಶ್ಚಿತ. ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಬಹುದು ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ಅಲ್ಲಿನ ಭೂ ಕುಸಿತಗಳನ್ನು ನೋಡಿದರೆ ಸುಮಾರು ಎರಡು ಶತಮಾನಗಳ ಹಿಂದೆ ಚಾರ್ಮಾಡಿ ಕಣಿವೆ, ಘಾಟಿ ಹೇಗಿತ್ತೋ ಅದೇ ರೀತಿ ಆಗುತ್ತೇನೆ ಎಂಬುದನ್ನು ಪ್ರಕೃತಿ ಈ ಬಾರಿ ಸೂಚನೆ ಕೊಟ್ಟಿದೆಯೇನೋ ಎಂಬ ಭಾವ ಮೂಡುವಂತೆ ಮಾಡಿದೆ.