ಮಂಗಳೂರು, ಆ 15 (Daijiworld News/RD): 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದ.ಕ. ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕರಾವಳಿಯಲ್ಲಿ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರದ ನಡುವೆಯು ನಗರದ ನೆಹರೂ ಮೈದಾನದಲ್ಲಿ ಇಂದು ಸರಳ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತುಂತುರು ಮಳೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಬಳಕ ಮಾತಾನಾಡಿದ ಅವರು, ದ.ಕ.ಜಿಲ್ಲೆಯು ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಒಳಗಾಗಿದ್ದು ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿರುವ ಎನ್.ಡಿ.ಆರ.ಎಫ್. ತಂಡವೂ ಸೇರಿದಂತೆ ಎಲ್ಲ ರಕ್ಷಣಾ ತಂಡಗಳಿಗೆ ಮತ್ತು ಅವಿರತವಾಗಿ ಶ್ರಮಿಸಿರುವ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಸರಕಾರದೊಂದಿಗೆ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿರುವ ವಿವಿಧ ಸಂಘ ಸಂಸ್ಥೇಗಳು, ಸಾರ್ವನಿಕರು, ದನಿಗಳು ಮತ್ತು ಮಾಧ್ಯಮ ಮಿತ್ರರಿಗೆ ಸರಕಾರದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು. ನೆರೆಯಿಂದಾಗಿ ಸಂಕಷ್ಟ ಸ್ಥಿತಿಯಲ್ಲಿ ಸಂತೃಸ್ತರು ಇದ್ದರೂ ಜಿಲ್ಲಾಡಳಿತದೊಂದಿಗೆ ಸಂಯಮದಿಂದ ಸಹಕಾರ ನೀಡಿದ್ದು, ನಿಮ್ಮ ಸೇವೆಗೆ ಸದಾ ಸಿದ್ಧ ಎಂದರು. ಕಳೆದ ನೂರು ವರ್ಷಗಳಲ್ಲಿ, ಈವರೆಗೆ ಕಂಡರಿಯದ ನೆರೆ ಪ್ರವಾಹ ಉಂಟಾಗಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿ, ಜನ ಸಾಮಾನ್ಯರ ಬದುಕು ಬೀದಿ ಪಾಲಾಗಿ ಸಂಕಷ್ಟದಲ್ಲಿರುವುದರಿಂದ, ಅವರ ಬಾಳಲ್ಲಿ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಾರ್ವಜನಿಕ ಬಂಧುಗಳು ಸಹಾಯ ಹಸ್ತದ ನೆರವು ನೀಡಿ ಸರಕಾರದೊಂದಿಗೆ ಸಹಕರಿಸುವಂತೆ ಈ ಸಂದರ್ಭದಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಪ್ರವಾಹ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸರಕಾರದಿಂದ ಜಿಲ್ಲೆಗೆ ಈ ಸಾಲಿನಲ್ಲಿ ಒಟ್ಟು 48.26 ಕೋಟಿ ಅನುದಾನ ಬಿಡುಗಡೆಯಾಗಿದ್ದು 918 ಕಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಹಾನಿಗೊಂಡ ಪ್ರದೇಶಗಳ ಪುರ್ನನಿರ್ಮಾಣಕ್ಕೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಾಚರಣೆಯ ನಿರಂತರವಾಗಿ ಜರಗುತ್ತಿದೆ ಎಂದು ಹೇಳಿದರು.ಸ್ವಾತಂತ್ರ್ಯ ಸಂಭ್ರಮದ ಈ ಗಳಿಗೆಯಲ್ಲಿ ದೇಶದ ಪ್ರಗತಿ, ಏಳಿಗೆ ಮತ್ತು ಐಕ್ಯತೆಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸುವ ದೃಢ ಸಂಕಲ್ಪಗಳನ್ನು ಭಾರತೀಯರಾದ ನಾವಿಂದು ಮಾಡಬೇಕಿದೆ. ಜೊತೆಗೆ ಜಾತಿ-ಮತ ಭೇದಗಳನ್ನು ಮರೆತು ಸರ್ವ ಧರ್ಮಗಳನ್ನು ಪ್ರೀತಿಸುವುದರ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಒಂದೇ ಮನೋಭಾವದಿಂದ ದೇಶವನ್ನು ಪ್ರಬಲ ರಾಷ್ಟ್ರವನ್ನಾಗಿ ಮುನ್ನಡೆಸಲು ನಾವು ಬದ್ಧರಾಗಬೇಕಾಗಿದೆ.
ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ನೇಮಕವಾದ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗದೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವಂತೆ ಸರ್ಕಾರ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಲೇ ಧ್ವಜಾರೋಹಣ ನೆರವೇರಿಸಿದ್ದು ಈ ಬಾರಿಯ ವಿಶೇಷ. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಐವನ್ ಡಿ ಸೋಜಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಶ್ರೀ ಲಕ್ಷ್ಮಿ ಎನ್, ಮಹ್ಮದ್ ಮಜೀಫ್, ತೇಜಸ್ವಿ ಕೆ, ಸಂತೋಷ್, ಪುಷ್ಪ, ಬಸವ್ವ ರುದ್ರಪ್ಪ ಚಲವಾಯಿ, ರಕ್ಷಿತಾ, ಲಿಖಿತ್ ಕುಮರ್, ರಹಿನ್ ತೌಶಿಯಾ ಅವರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ ಅಭಿನಂದನೆ ಸಲ್ಲಿಸಲಾಯಿತು.
ತುಂತುರು ಮಳೆಯ ನಡುವೆಯು ಎನ್.ಸಿ.ಸಿ, ಸ್ಕೌಟ್ ವಿದ್ಯಾರ್ಥಿಗಳಿಂದ, ಪೊಲೀಸ್, ಗೃಹ ರಕ್ಷಕ ದಳದಿಂದ ಆಕರ್ಷಕ ಪಥಸಂಚಲನ ನಡೆಯಿತು. ಮಳೆಯ ಕಾರಣವಾಗಿ ಸಾಂಕೇತಿಕವಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಸಿದ್ದು ಈ ಬಾರಿಯ ವಿಶೇಷ. ವಿಶೇಷ ಚೇತನ ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.