ಕುಂದಾಪುರ,ಆ 15 (Daijiworld News/RD): ಈ ಫಿಶ್ ಸ್ಟೋರೇಜ್ನಲ್ಲಿ ಅಮೋನಿಯಾ ಲಿಕ್ವಿಡ್ ಸೋರಿಕೆಯಾದ ಪರಿಣಾಮ ಅರವತ್ತೇಳು ಮಹಿಳಾ ಕಾರ್ಮಿಕರು ಹಾಗೂ ಏಳು ಪುರುಷ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಸೋಮವಾರ ಮುಂಜಾನೆ ಹೆಮ್ಮಾಡಿ ಸಮೀಪದ ಕಟ್ಬೆಲ್ತೂರು ಗ್ರಾಮ ಪಂಚಾಯಿತಿ ಸಮೀಪ ದೇವಲ್ಕುಂದಲ್ಲಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಲ್ಲಿ ನಡೆದಿದ್ದು, ಕಾರ್ಮಿಕರು ಅಸ್ವಸ್ಥರಾಗಲು ಕಾರ್ಖಾನೆಯಲ್ಲಿ ಅಳವಡಿಸಿದ್ದ ಪೈಪ್ ಗಳು ತುಕ್ಕು ಹಿಡಿದು ತುಂಡಾಗಿದ್ದು, ಇದರಿಂದಾಗಿ ಅನಿಲ ಸೋರಿಕೆಯಾಗಿದೆ ಎಂದು ಸಹಾಯಕ ಕಮಿಷನರ್ ಡಾ.ಎಸ್.ಎಸ್.ಮಧುಕೇಶ್ವರ್ ಹೇಳಿದರು.
ಬುಧವಾರ ಕಟ್ ಬೆಲ್ತೂರು ಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆ ಫ್ರೆಶ್ ಮರೈನ್ ಎಕ್ಸಪೋರ್ಟ್ ಘಟಕಕ್ಕೆ ತನಿಖಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರಲ್ಲಿ ಕಾರ್ಖಾನೆಯಲ್ಲಿ ಯಂತ್ರಗಳನ್ನು ಅಳವಡಿಸಿದ್ದು ನಿರ್ವಹಣೆಯಿಲ್ಲದೇ ಎರಡು ಪೈಪ್ ಗಳನ್ನು ಜೋಡಿಸಿದಲ್ಲಿನ ಕ್ಲಾಂಪ್ ಗೆ ಅಳವಡಿಸಿದ ಕಬ್ಬಿಣದ ಬೋಲ್ಟ್ ತುಕ್ಕು ಹಿಡಿದ ಕಾರಣ ತುಂಡಾಗಿದ್ದು ಇದರಿಂದ ಅನಿಲ ಸೋರಿಕೆಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದರು.
ಇಲ್ಲಿ ಒಟ್ಟು401 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ವೇತನಕ್ಕೆ ಸಂಬಂಧಿಸಿದ ದೂರುಗಳಿಲ್ಲ. ಕಾರ್ಮಿಕರಿಗೆ ಘಟಕ ಆವರಣದಲ್ಲಿ ವಸತಿ ಕಲ್ಪಿಸುವಂತಿಲ್ಲ ಈ ಬಗ್ಗೆ ಕಾರ್ಮಿಕ ಇಲಾಖೆ ವಿವರಣೆ ಕೇಳಲಿದೆ. ಘಟಕ ನಿರ್ವಹಣೆ ಕಡೆಗೆ ಗಮನಹರಿಸಿಲ್ಲ. ಅಗ್ನಿ ಅವಘಡ, ಕಾರ್ಖಾನೆ ಸಂಬಂಧದ ಅವಘಡಗಳ ಅಣುಕು ಪ್ರದರ್ಶನ ಮಾಡಿದ್ದರೂ ರಸಾಯನಿಕ ಅವಘಡದ ನಿರ್ವಹಣೆ ಸುರಕ್ಷತೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ ನಿರ್ವಾಹಕರಿಗೆ ಜೀವರಕ್ಷಕ ಸಾಧನ, ಪ್ರಥಮ ಚಿಕಿತ್ಸೆ ಸಲಕರಣೆ ಈ ರೀತಿಯ ಯಾವುದೇ ತುರ್ತು ಪರಿಸ್ಥಿತಿ ನಿರ್ವಹಣೆಯ ಸಾಧನಗಳನ್ನು ಕಾರ್ಖಾನೆಯಲ್ಲಿ ಇಟ್ಟಿಲ್ಲ ಎಂದರು. ಹಲವು ವರ್ಷಗಳಿಂದ ಈ ಕಾರ್ಖಾನೆಯು ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ತೆಗೆದುಕೊಂಡಿಲ್ಲ ಇದೂ ಕೂಡ ಈ ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಎಂಸಿಎಫ್ ನಿಂದ ತಜ್ಞರ ತನಿಖಾ ತಂಡ ತನಿಖೆ ನಡೆಸಿ, 8 ಟನ್ ಗ್ಯಾಸ್ ಪೈಕಿ 1.5 ಟನ್ ನಷ್ಟು ಗ್ಯಾಸ್ ಪೈಪ್ ನಲ್ಲಿದೆ. ಪೈಪ್ ನ ಒಳಗೆ ಅನಿಲದ ಒತ್ತಡ ಹೆಚ್ಚಾಗಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇದರ ತೆರವಿಗೆ ಮಂಗಳೂರಿನ ಎಂಸಿಎಫ್ ನಿಂದ ಪರಿಣಿತರು ಆಗಮಿಸಲಿದ್ದಾರೆ. ಅಗ್ನಿಶಾಮಕದಳ, ಅಂಬ್ಯುಲೆನ್ಸ್ ಮೊದಲಾದ ಮುಂಜಗ್ರತ ಕ್ರಮಗಳೊಂದಿಗೆ ಪೈಪ್ ನ ಅನಿಲ ಖಾಲಿ ಮಡಲಾಗುವುದು ಈಗಾಗಲೇ ಘಟಕಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಯಂತ್ರ ಸರಬರಾಜು ಮಾಡಿದ ಸಂಸ್ಥೆಯವರು ಮುಂಬಯಿಂದ ಬಂದಿದ್ದು, ಸೋರಿಕೆಯಾದಲ್ಲಿಗೆ ತಾತ್ಕಲಿಕವಾಗಿ ವೆಲ್ಢಿಂಗ್ ಮಾಡಿದ್ದನ್ನು ಪರಿಶೀಲಿಸುತ್ತಿದ್ದಾರೆ. ಈ ಸಂದರ್ಭ ಕೈಗಾರಿಕ ಇಲಾಖೆಯ ಬಾಯ್ಲರ್ಸ್ ವಿಭಾಗದವರು ಉಪಸ್ಥಿತರುತ್ತಾರೆ. ಯಂತ್ರ ನಿರ್ವಹಣೆ ಕುರಿತು ಕಂಪೆನಿ ನಿರಾಕ್ಷೇಪಣಾ ಪತ್ರ ನೀಡಬೇಕು. ಸುರಕ್ಷತಾ ಕ್ರಮಗಳನ್ನು ಅಳವಡಿಸಿದ ಬಳಿಕವಷ್ಟೆ ಘಟಕ ಆರಂಭವಾಗಲಿದೆ ಎಂದರು. ಹೀಗಾಗಿ ಕಾರ್ಮಿಕರಿಗೆ 1 ವಾರದ ರಜೆ ನೀಡಲಾಗಿದೆ ಎಂದರು.
ಡಿವೈಎಸ್ ಪಿ ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಬೈದೂಂರು ತಲುಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್, ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ.ಲಕ್ಷ್ಮೀ ಕಾಂತ್, ವಾಮನ ನಾಯಕ್ , ಜಿಲ್ಲಾ ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ, ಫ್ಯಾಕ್ಟರೀಸ್ ಆಂಡ್ ಬಾಯ್ಲರ್ಸ್ ಇಲಾಖೆಯ ಪ್ರತಾಪ್, ಅಗ್ನಿಶಾಮಕ ದಳದ ಕೊರಗ ಮೊಗವೀರ, ರಾಘವೇಂದ್ರ ಆಚಾರ್ ಉಪಸ್ಥಿತರಿದ್ದರು.