ಉಡುಪಿ,ಆ 15 (Daijiworld News/RD): ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಬೆಳಿಗ್ಗೆ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರದಲ್ಲಿ, ಜಿಲ್ಲಾ ಮಟ್ಟದ ಸ್ವಾತಂತ್ರ್ಯ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ನಂತರ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿಯವರು ಧ್ವಜಾರೋಹಣ ಮಾಡಿ, ಗೌರವ ರಕ್ಷೆ ಸ್ವೀಕರಿಸಿದರು.
ಉಡುಪಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪಥಸಂಚಲನದ ಪರೇಡ್ ನಡೆಯಿತು. ಪಥಸಂಚಲನ ಸಮಾಪ್ತವಾದ ಬಳಿಕ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯಪಾತ್ರ ವಹಿಸಿದ ಬಾಲಗಂಗಾಧರ್ ತಿಲಕ್, ಸುಭಾಷ್ಚಂದ್ರ ಬೋಸ್ರಂತಹ ಚಿರಂಜೀವಿ ನಾಯಕರು, ಭಗತ್ಸಿಂಗ್ರಂಥಹ ನೂರಾರು ಹುತಾತ್ಮರನ್ನು ಮತ್ತು ಲಾಟಿ ಏಟು ತಿಂದು ಜೈಲು ಸೇರಿದ ಸಾವಿರಾರು ಜನಸಾಮಾನ್ಯರನ್ನು ಇಂದು ನಾವು ಸ್ಮರಿಸುವ ದಿನ.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯೂ ತನ್ನನ್ನೂ ತಾನೂ ತೊಡಗಿಸಿಕೊಂಡಿದ್ದಾಳೆ. ಬ್ರಿಟಿಷರಿಗಿಂತ ಮೊದಲು, ಭಾರತದಲ್ಲಿ ನೆಲೆಯೂರಲು ಬಂದ ಪೋರ್ಚುಗೀಸರ ವಿರುದ್ಧ ಹೋರಾಡಿದ ತೌಳವರರಾಣಿ ಅಬ್ಬಕ್ಕ, ಓರ್ವ ದಿಟ್ಟ ಮಹಿಳೆ. ಕಿತ್ತೂರಿನ ರಾಣಿ ಚೆನ್ನಮ್ಮ, ಬೆಳವಾಡಿಯ ಮಲ್ಲಮ್ಮ, ಝಾನ್ಸಿಯ ವೀರ ಮಹಿಳೆ ಲಕ್ಷ್ಮೀಬಾಯಿ, ಉಮಾಬಾಯಿ ಕುಂದಾಪುರ ಹೀಗೆ ಮುಂತಾದ ಮಹಿಳೆಯರು ನೇರವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದವರು.
ಇನ್ನು 1927ರಲ್ಲಿ ಖಾದಿ ಪ್ರಚಾರಕ್ಕಾಗಿ ಮಹಾತ್ಮ ಗಾಂಧಿಯವರು ಉಡುಪಿಗೆ ಬಂದ ಬಗೆಯನ್ನು ತಿಳಿಸಿದರು. 1934 ರಲ್ಲಿ ಮಹಾತ್ಮ ಗಾಂಧಿಯವರು ಅಸ್ಪೃಷ್ಯತಾ ವಿರೋಧಿ ಚಳುವಳಿಗಾಗಿ ದಕ್ಷಿಣ ಕನ್ನಡಕ್ಕೆ ಬಂದರು. ತದನಂತರ ಜಿಲ್ಲೆಯ ಜಲಸಂರಕ್ಷಣೆ, ಪ್ರಾಕೃತಿಕ ವಿಕೋಪದಿಂದ ಅನುಭವಿಸಿದ ತೊಂದರೆ ಮತ್ತು ಪರಿಹಾರಗಳ ಕುರಿತು ಮಾತನಾಡಿದರು.
ಇದೀಗ ಭಾರತ ಸರ್ಕಾರವು ಜಲಭದ್ರತೆಗಾಗಿ ’ಜಲಶಕ್ತಿ ಅಭಿಯಾನ’ ಕಾರ್ಯಕ್ರಮವನ್ನು ರಾಜ್ಯಸರ್ಕಾರಗಳ ಸಹಯೋಗದಲ್ಲಿ ಹಮ್ಮಿಕೊಂಡಿದೆ. ಜಲಾವೃತ ಯೋಜನೆಯಡಿ ಜಲಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮೊದಲಾದ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಉಡುಪಿಯಲ್ಲಿ ಈ ಸಾಲಿನ ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ.
ಪ್ರಾಕೃತಿಕ ವಿಕೋಪದಿಂದಾಗಿ ಮೃತ ಪಟ್ಟ ಕುಟುಂಬದ ಸದಸ್ಯರಿಗೆ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ 4 ಲಕ್ಷ ಪರಿಹಾರಧನ ಜೊತೆಯಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 1 ಲಕ್ಷ ಅನುದಾನವನ್ನು ಪಾವತಿಸಲಾಗುತ್ತದೆ. ಈ ಅನುದಾನ ನೀಡುವ ಸಲುವಾಗಿ, ಸರ್ಕಾರವು ಉಡುಪಿ ಜಿಲ್ಲೆಗೆ 5 ಕೋಟಿ ಬಿಡುಗೊಡೆಗೊಳಿಸಿದೆ.
ಕೇಂದ್ರ ಸರ್ಕಾರವು ರಸ್ತೆ ಸುರಕ್ಷತಾ ಸಪ್ತಾಹವನ್ನು ಸಡಕ್ ಸುರಕ್ಷಾ - ಜೀವನ್ ರಕ್ಷಾ ಎಂಬ ಧ್ಯೇಯದೊಡನೆ ಆಚರಿಸಲು ಸೂಚಿಸಿದೆ. ಆದ್ದರಿಂದ ಅಪಘಾತವನ್ನು ತಪ್ಪಿಸಲು, ಸಾರ್ವಜನಿಕರು ರಸ್ತೆ ಸುರಕ್ಷತೆಯ ನಿಯಮಗಳನ್ನು ಅರಿತುಕೊಂಡು ವಾಹನಗಳನ್ನು ಚಾಲನೆ ಮಾಡಬೇಕು. ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮದ ತತ್ವವನ್ನು ಸಕಾರಾತ್ಮಕವಾಗಿ ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ಸಂದೇಶ ನೀಡಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್, ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಸಿಂಧು ಬಿ. ರೂಪೇಶ್, ಉಡುಪಿಯ ಶಾಸಕರಾದ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಪಂಚಾಯತ್ನ ಅಧ್ಯಕ್ಷರಾದ ದಿನಕರ ಬಾಬಾ ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಕೊನೆಯಲ್ಲಿ 2019 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ, ಎಸ್. ಎಸ್. ಎಲ್. ಸಿ. ಹಾಗೂ ಪಿಯುಸಿ ವಾರ್ಷಿಕ ಪರೀಕ್ಷಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಮತ್ತು ರಸ್ತೆ ಸುರಕ್ಷಿತ ಅಭಿಯಾನದಲ್ಲಿ ಭಾಗವಹಿಸಿದ ಉತ್ತಮ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.