ಕುಂದಾಪುರ,ಆ 16 (Daijiworld News/RD):ಅಂಚೆ ಬಟವಾಡೆ ಮಾಡಲೆಂದು ಹೋದ ಅಂಚೆ ಪೇದೆ (ಪೋಸ್ಟ್ ಮ್ಯಾನ್) ಒಬ್ಬ ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ. ಹೊಳೆಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿಯನ್ನು ನಾಡಾ ನಿವಾಸಿ ರಾಬರ್ಟ್ ಬಾಂಜ್ ಎಂದು ಗುರುತಿಸಲಾಗಿದೆ.
ಅವರ ಮೃತದೇಹವು ಶುಕ್ರವಾರ ಬೆಳಿಗ್ಗೆ ಗಂಗೊಳ್ಳಿಯ ಸಮೀಪದ ಗುಜ್ಜಾಡಿಯ ಕಳಿಹಿತ್ಲು ಎಂಬಲ್ಲಿ ಪತ್ತೆಯಾಗಿದೆ. ರಾಬರ್ಟ್ ಬಾಂಜ್ ಅತ್ತಿಕೋಣೆ ನಿವಾಸಿ ವಾಲ್ಟರ್ ಫೆರ್ನಾಂಡೀಸ್ ಅವರನ್ನು ಆಗಸ್ಟ್ 14 ರಂದು ತನ್ನ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಗುಡ್ಡೆಯಂಗಡಿ ಕಡೆಗೆ ಹೋಗಿ ಅಲ್ಲಿನ ಜೋನಿ ಡಿ ಅಲ್ಮೇಡ ರವರ ಗೂಡಾಂಗಡಿ ಬಳಿ ವಾಲ್ಟರ್ ಫೆರ್ನಾಂಡೀಸ್ ರವರನ್ನು ಬಿಟ್ಟು ಪೋಸ್ಟ್ ಡಿಲೆವರಿ ಮಾಡಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ರಾತ್ರಿಯಾದರೂ ರಾಬರ್ಟ್ ವಾಪಾಸ್ಸಾಗಿರಲಿಲ್ಲ.
ಕೊನೆಗೆ ಹುಡುಕಾಟ ಆರಂಭಿಸಿದ ಮನೆಯವರು ನಾಡ ಕಳುವಿನ ಬಾಗಿಲು ಬಳಿ ಹೋಗಿ ನೋಡಿದಾಗ ರಾಬರ್ಟ್ ಬಾಂಜ್ ರವರು ಬಳಸಿದ ಸ್ಕೂಟರ್ ಹೊಳೆಯ ಬದಿ ಇದ್ದು, ಅವರ ಚಪ್ಪಲಿ ನೀರಿನಲ್ಲಿ ತೇಲುತ್ತಿತ್ತು. ಕಾಲು ದಾರಿಯಲ್ಲಿ ಕೊಡೆ ಹಿಡಿದು ನಡೆದುಕೊಂಡು ಹೋಗುತ್ತಿರುವಾಗ ವಿಪರೀತ ಗಾಳಿ ಮಳೆಯಿಂದಾಗಿ ಆಯತಪ್ಪಿ ಹೊಳೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ಅವರ ಮೃತ ದೇಹವು ಕಳಿಹಿತ್ಲುವಿನಲ್ಲಿ ಪತ್ತೆಯಾಗಿದೆ.