ಕಾರ್ಕಳ, ಆ 16 (Daijiworld News/MSP): ಬೆಳ್ತಂಗಡಿ ತಾಲೂಕಿನ ಹಲವಾರು ಗ್ರಾಮಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ಸಾವಿರಾರು ಜನ ಮನೆ ಮಠ ಕಳೆದುಕೊಂಡು ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನೆರೆಗೆ ಹಾನಿಗೀಡಾದ ಮನೆಗಳನ್ನು ಮತ್ತು ರಸ್ತೆಗಳನ್ನು ಅತೀ ಶೀಘ್ರ ಪುನರ್ ನಿರ್ಮಾಣ ಮಾಡಬೇಕಾಗಿದ್ದು ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರಾದ ಹರೀಶ್ ಪೂಂಜಾರವರ ಮನವಿ ಮೇರೆಗೆ ಕಾರ್ಕಳ ಬಿಜೆಪಿ ತಂಡ ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ತಂಡವು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಬೆಳ್ಳೂರು ತೆರಳಿ ಸ್ವಚ್ಚತಾ ಹಾಗೂ ಪುನರ್ ನಿರ್ಮಾಣ ಕಾರ್ಯ ನಡೆಸಿದರು.
ಕಾರ್ಕಳ ಬಿಜೆಪಿಯ 100 ಕಾರ್ಯಕರ್ತರು ಶ್ರಮದಾನಕ್ಕೆ ತೊಡಗಿಸಿಕೊಂಡಿದ್ದರು. ಶ್ರಮದಾನಕ್ಕೆ ಬೇಕಾಗಿರುವ ಎಲ್ಲಾ ಪಿಕ್ಕಾಸು, ಕತ್ತಿ, ಕಟ್ಟಿಂಗ್ ಮಿಷನ್ ಹಾಗೂ ರಸ್ತೆ ಸರಿ ಪಡಿಸುವರೇ ಜೆಸಿಬಿಯ ತಮ್ಮ ಸ್ವಂತ ಖರ್ಚಿನಿಂದಲೇ ವ್ಯವಸ್ಥೆ ಮಾಡಿಕೊಂಡು ಹೊರಡಿರುವುದು ವಿಶೇಷವಾಗಿದೆ.
ಶ್ರಮದಾನದಲ್ಲಿ ಪಾಲ್ಗೊಳ್ಳುವ ಎಲ್ಲಾ ಕಾರ್ಯಕರ್ತರಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕೂಡ ಇಲ್ಲಿಯೇ ತಯಾರಿಸಿ ಕೊಂಡುಹೋಗಿದ್ದು ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮುತುವರ್ಜಿ ವಹಿಸಿದ್ದಾರೆ. ಮೊದಲಾಗಿ ರಸ್ತೆ ಸಂಪರ್ಕವನ್ನು ಕಳೆದುಕೊಂಡಿದ್ದ ಕಡಿರುದ್ಯಾವರ ಗ್ರಾಮದ ಬೆಳ್ಳೂರು ಬೈಲು ಪ್ರದೇಶಕ್ಕೆ ಹಾನಿಗೊಂಡ ರಸ್ತೆಯನ್ನು ಜೆಸಿಬಿ ಮೂಲಕ ತೆರವು ಗೊಳಿಸುವ ಕಾರ್ಯ ಮಾಡಿ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡಿದ್ದ ಗ್ರಾಮಸ್ಥರಿಗೆ ಸಂಪರ್ಕ ಕಲ್ಪಿಸಿಕೊಡಲಾಯಿತು.
ನೆರೆಯಿಂದ ಹಲವಾರು ಮನೆಗಳು ಮುಳುಗಿ ಹೋಗಿದ್ದು ಮನೆ ಒಳಗೆ ಹಾಗೂ ಅಂಗಳಗಳಲ್ಲಿ ಮಣ್ಣು, ಕೆಸರು ತುಂಬಿಕೊಂಡಿದ್ದು ಎಲ್ಲಾ ಮನೆಗಳನ್ನು ಸ್ವಚ್ಚಗೊಳಿಸಿದ್ದಲ್ಲದೇ ಹಾನಿಗೀಡಾಗಿರುವ ಮನೆಗಳನ್ನು ಪುನರ್ ನಿರ್ಮಾಣ ಮಾಡಿ ವಾಸಕ್ಕೆ ಯೋಗ್ಯವನ್ನಾಗಿ ಮಾಡಲಾಯಿತು. ಮನೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಬೇಕಾದ ಎಲ್ಲಾ ಕೆಲಸಗಾರರನ್ನು ಕೂಡ ಇಲ್ಲಿಂದಲೇ ಕರೆದುಕೊಂಡು ಹೋಗಲಾಗಿದೆ ಎಂದು ಶಾಸಕರ ಕಚೇರಿ ಮೂಲ ತಿಳಿಸಿದೆ.