ಮಂಗಳೂರು, ಆ 16 (Daijiworld News/SM): ದೇಶದೊಳಗೆ ಉಗ್ರರು ನುಸುಳಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ದೇಶದಾದ್ಯಂತ ತೀವ್ರ ತಪಾಸಣೆ ನಡೆಯುತ್ತಿದೆ.
ಕರಾವಳಿಯಲ್ಲೂ ತೀವ್ರ ನಿಗಾ ವಹಿಸಲಾಗಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಸಂಪೂರ್ಣ ಎಚ್ಚರಿಕೆ ವಹಿಸಲಾಗಿದೆ. ಮಂಗಳೂರು ನಗರದ ಆಸ್ಪತ್ರೆ, ಮಾಲ್, ಐಟಿ ಕಂಪೆನಿ ಸೇರಿದಂತೆ ಪ್ರಮುಖ ಸ್ಥಳಗಳು ಹಾಗೂ ಕಟ್ಟಡಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಮುಖವಾಗಿ ಮುಡಿಪು ಇನ್ಫೋಸಿಸ್, ಸೂರ್ಯ ಇನ್ಫೋಟೆಕ್, ಕ್ಷೇಮ ಆಸ್ಪತ್ರೆ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಹಠಾತ್ತನೆ ಪೊಲೀಸ್ ಪಹರೆ ಏರ್ಪಡಿಸಿ ಶ್ವಾನದಳ, ಬಾಂಬ್ ಸ್ಕ್ವಾಡ್ ಬಳಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಲಾಗಿದೆ.
ದೇಶದ ಯಾವುದೇ ಭಾಗದಲ್ಲಿ ಉಗ್ರದ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಇನ್ನು ಈ ನಡುವೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳು, ಆಸ್ಪತ್ರೆ, ಬ್ಯಾಂಕ್, ಶಿಕ್ಷಣ ಸಂಸ್ಥೆಗಳು, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲೂ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂ ನಗರದಲ್ಲೂ ಪೊಲೀಸರು ಹೈ ಅಲರ್ಟ್ ವಹಿಸಿಕೊಂಡಿದ್ದು, ಎಲ್ಲಾ ಕಡೆಗಳಲ್ಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ. ತೀವ್ರ ಗತಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.