ಉಡುಪಿ, ಆ 17 (Daijiworld News/MSP): ಉಡುಪಿ ಶ್ರೀ ಕೃಷ್ಣ ನನ್ನು ಆರಾಧಿಸುವ ಅಷ್ಟ ಮಠಗಳಿಗೂ ಲಿಖಿತ ಸಂವಿಧಾನಕ್ಕಾಗಿ ಹೂಡಿದ ದಾವೆಯ ವಿಚಾರಣೆಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆ. 12 ಕ್ಕೆ ಮುಂದೂಡಿದೆ.
800 ವರ್ಷಗಳ ಮಧ್ವ ಪರಂಪರೆಯ ಅಲಿಖಿತ ನಿಯಮಕ್ಕೆ ಪಂಡಿತರ ಮುಖೇನ ಅಕ್ಷರ ರೂಪಕೊಟ್ಟು, ಅಷ್ಟಮಠಗಳ ಪೀಠಾಧಿಪತಿ ಆದವರ ಆಚಾರ ವಿಚಾರ, ಪದ್ಧತಿ ಅನುಷ್ಠಾನ, ಜವಾಬ್ದಾರಿ, ಪೂಜೆ, ವಿಧಿವಿಧಾನಗಳ ಬಗ್ಗೆ ಲಿಖಿತ ಸಂವಿಧಾನದ ಕರಡಿನಲ್ಲಿ ಉಲ್ಲೇಖವಿದೆ. ಆದರೂ ಒಂದು ಲಿಖಿತ ಸಂವಿಧಾನ ಅಗತ್ಯತೆ ಇದೆ ಎಂದು ಪೇಜಾವರ ಮಠದ ಪರಿತ್ಯಕ್ತ ಶ್ರೀಗಳಾದ ವಿಶ್ವ ವಿಜಯರು ಅಷ್ಟಮಠಗಳ ಯತಿಗಳಿಗೊಂದು ಲಿಖಿತ ಸಂವಿಧಾನ ಬೇಕೆಂದು ಪ್ರತಿಪಾದಿಸಿದ್ದು ಸೂಕ್ತ ಆದೇಶ ನೀಡುವಂತೆ ದಾವೆ ಹೂಡಿದ್ದರು. ಕಾಣಿಯೂರುಪುತ್ತಿಗೆ ಮಠ, ಕೃಷ್ಣಾಪುರ ಮಠ, ಪಲಿಮಾರು ಮಠ, ಪೇಜಾವರ ಮಠ ಸೋದೆ ಮಠದ ಮಠಾಧೀಶರನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಪ್ರತಿವಾದಿಗಳಿಗೆ ಕೋರ್ಟ್ ನೋಟೀಸ್ ರವಾನಿಸಿದ್ದು, ಆದಮಾರು ಮತ್ತು ಕೃಷ್ಣಾಪುರ ಮಠದ ಪರವಾಗಿ ಯಾವುದೇ ವಕೀಲರನ್ನು ನೇಮಿಸಿಲ್ಲ. ಪೇಜಾವರ ಮತ್ತು ಕಾಣಿಯೂರು ಮಠದ ಪರವಾಗಿ ವಕೀಲರು ಆಕ್ಷೇಪ ದಾಖಲಿಸಲು ಸಮಯ ಕೇಳಿದ್ದಾರೆ.