ಮಂಗಳೂರು, ಆ 17 (Daijiworld News/MSP): ನ್ಯಾಶನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ಎಂದು ಬೋರ್ಡ್ ಹಾಕಿ ಕೇಂದ್ರ ಸರಕಾರದ ಲಾಂಛನ ಉಪಯೋಗಿಸಿ, ದರೋಡೆಗೆ ಸಂಚು ನಡೆಸುತ್ತಿದ್ದ 8 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಪಂಪವೆಲ್ ಬಳಿ ಬಂಧಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, "ಅಂತರಾಜ್ಯ ವಂಚನಾ ಜಾಲ ಇದಾಗಿದ್ದು , ನಿಖರ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳನ್ನು ವಶಪಡಿಸಿ ಅವರಿಂದ ಸುಮಾರು 20 ಲಕ್ಷ ಮೌಲ್ಯದ 2 ಕಾರು, 1 ಪಿಸ್ತೂಲ್, 1 ರಿವಾಲ್ವರ್ ಮತ್ತು 8 ಜೀವಂತ ಗುಂಡುಗಳನ್ನು ಹಾಗು ಅವರಲ್ಲಿದ್ದ 10 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಠರ್ ಆಗಿದ್ದು ಇತನೊಂದಿಗೆ ಮಂಗಳೂರು ಮೊಹಿದ್ದಿನ್, ಮಂಗಳೂರು ಅಬ್ದುಲ್ ಲತೀಪ್ , ಮಡಿಕೇರಿಯ ಟಿ.ಕೆ. ಬೋಪಣ್ಣ (33 ), ಕೊಡಗು ವಿರಾಜಪೇಟೆ ತಾಲೂಕಿನ ಚಿನ್ನಪ್ಪ (38), ಬೆಂಗಳೂರಿನ ನೀಲಸಂದ್ರದ ಮದನ್ (41), ಬೆಂಗಳೂರು ಕನಕಪುರ ಮುಖ್ಯ ರಸ್ತೆಯ ಸುನೀಲ್ ರಾಜು (35) ಬೆಂಗಳೂರು, ಉತ್ತರಹಳ್ಳಿಯ ಕೋದಂಡರಾಮ (39) ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆ.16 ರಂದು ಈ ಘಟನೆ ನಡೆದಿದ್ದು ಮಂಗಳೂರು ನಗರದ ಪಂಪವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಕುಳಿತು ಹೊಂಚು ಹಾಕುತ್ತಿದ್ದಾರೆಂದು ಮಾಹಿತಿ ಆಧಾರಿಸಿ ಕದ್ರಿ ಪೊಲಿಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಪಂಪವೆಲ್ ಗೆ ಧಾವಿಸಿದಾಗ ಸರ್ಕಾರಿ ಕಾರಿನಂತೆ ಬೋರ್ಡ್ ಹಾಕಿದ ನಂಬರ್ ಪ್ಲೇಟ್ ಇಲ್ಲದ ಪೂರ್ಣ ಕಪ್ಪು ಟಿಂಟ್ ಇದ್ದ ಮಹೀಂದ್ರಾ ಟಿಯುವಿ-300 ಕಾರು ಪತ್ತೆಯಾಗಿತ್ತು. ಪೊಲೀಸರು ಕಂಡ ತಕ್ಷಣ ಪರಾರಿಯಾಗಲು ಯತ್ನಿಸಿದ ಕಾರಿನಲ್ಲಿ ಚಾಲಕ ಹಾಗೂ ಸಫಾರಿ ಡ್ರೆಸ್ ಹಾಕಿದ ಐವರನ್ನು ವಶಕ್ಕೆ ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ.
ಇವರನ್ನು ವಿಚಾರಿಸಿದಾಗ, ಖಾಸಗಿ ಲಾಡ್ಜೊಂದರಲ್ಲಿ ತಂಡದ ನಾಯಕ ಸ್ಯಾಮ್ ಪೀಟರ್ ಹಾಗೂ ಮತ್ತಿಬ್ಬರು ಇದ್ದು, ಆತನ ಸೂಚನೆಯಂತೆ ಒರ್ವ ದರೋಡೆ ನಡೆಸಲು ಹೊಂಚು ಹಾಕುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇದಲ್ಲದೆ ಕಾರಿನಲ್ಲಿದ್ದ ಬೋಪಣ್ಣ ಎಂಬಾತನ ಕೈಯಲ್ಲಿ ,22 ರಿವಾಲ್ವರ್ ಮತ್ತು ಅದರಲ್ಲಿ 8 ಜೀವಂತ ಗುಂಡುಗಳು ಪತ್ತೆಯಾಗಿತ್ತು. ಇದೇ ಸಂದರ್ಭ ಖಾಸಗಿ ಲಾಡ್ಜ್ ಗೆ ದಾಳಿ ನಡೆಸಿದಾಗ ಅಲ್ಲೂ ನಟೋರಿಯಸ್ ತಂಡದ 3 ಜನರು ಪತ್ತೆಯಾಗಿದ್ದು ಅವರಲ್ಲಿ ಮಂಗಳೂರಿನ ಮೊಹಿದ್ದಿನ್ , ಅಬ್ದುಲ್ ಲತೀಪ್ ಇದ್ದು ಇವರೊಂದಿಗೆ ಸ್ಯಾಮ ಪೀಟರ್ ನ್ನು ಬಂಧಿಸಿದ್ದಾರೆ. ಈ ಸಂದರ್ಭ ಸ್ಯಾಮ ಪೀಟರ್ ಬಳಿ ಇದ್ದ ನಕಲಿ ಐಡಿ ಕಾರ್ಡ್ ನ್ನು ಮತ್ತು ವಿಸಿಟಿಂಗ್ ಕಾರ್ಡ್ ಹಾಗು ಆತನಲ್ಲಿದ್ದ 4.5 ಎಂ.ಎಂ ಪಿಸ್ತೂಲ್, ಲ್ಯಾಪ್ ಟ್ಯಾಪ್, ವಾಯಿಸ್ ರೇಕಾರ್ಡ್ ರ್, ಹಾಗು ಇತರ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹರ್ಷ ತಿಳಿದ್ದಾರೆ.
ಬಂಧಿತ ಆರೋಪಿ ಸ್ಯಾಮ ಪೀಟರ್ ಗೆ ಕೊಲ್ಕತ್ತಾ, ಭುವನೇಶ್ವರ ಸೇರಿ ಹಲವೆಡೆ ಈತನಿಗೆ ಸಂಪರ್ಕವಿದೆ ಎಂದು ತಿಳಿದು ಬಂದಿದ್ದು ಅಂತರಾಜ್ಯ ವಂಚನಾ ಜಾಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದುಈ ಬಗ್ಗೆ ಸಮಗ್ರ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.ಇವರ ಜಾಲದ ಬಗ್ಗೆ ಮತ್ತು ಆರ್ಥಿಕ ಜಾಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.