ಮೂಡುಬಿದಿರೆ, ಡಿ 22: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಕ್ರಿಸ್ಮಸ್ 2017 ಕಾರ್ಯಕ್ರಮವನ್ನು ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಯಿತು.
ಮಂಗಳೂರು ಧರ್ಮ ಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ. ವೋಲ್ಟರ್ ಡಿ'ಮೆಲ್ಲೊ ಕ್ರಿಸ್ಮಸ್ ಸಂದೇಶ ನೀಡಿ, ಭಯೋತ್ಪಾದನೆ, ಅಶಾಂತಿಯಂತಹ ಪರಿಸ್ಥಿತಿಯಲ್ಲಿ ಶಾಂತಿಯ ಮರು ಸ್ಥಾಪನೆಯಾಗಬೇಕು. ಹೃದಯಾಂತರಾಳದಲ್ಲಿ ಪ್ರೀತಿ, ವಿಶ್ವಾಸ, ಸಹೋದರತೆಯ ಭಾವನೆ ಪ್ರತಿಯೊಂದು ಮತದ ಜನರಲ್ಲಿ ಮೂಡಬೇಕು. ಹೃದಯವಂತರಾಗಿ ಶಾಂತಿಯನ್ನು ಅನುಭವಿಸುವುದು ಆದ್ಮಾತ್ಮದ ಅನುಭೂತಿ ಪಡೆಯಲು ಸಾಧ್ಯವಾಗುತ್ತದೆ. ದೇವರ ಮೇಲಿನ ಭಕ್ತಿ ಸುಮನಸ್ಸನ್ನು ನೀಡುತ್ತದೆ. ವಿಶ್ವದ ಶಾಂತಿಯ ಪ್ರತೀಕವಾಗಿರುವ ಕ್ರಿಸ್ಮಸ್ ಹಬ್ಬವು ಪ್ರತಿಯೊಬ್ಬರಿಗೆ ಒಳಿತನ್ನು ಉಂಟು ಮಾಡಲಿ ಎಂದು ಶುಭ ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಸಾಮರಸ್ಯದ ಕೊರತೆ, ಧರ್ಮಸಾರವನ್ನು ಅರ್ಥಮಾಡಿಕೊಳ್ಳಲ್ಲದ ಮನಸ್ಥಿತಿಯಿಂದ ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಕಂದಕ ಉಂಟಾಗಲು ಕಾರಣವಾಗದೆ. ಅಹಿಂಸೆ, ಸತ್ಯಶೋಧನೆಯಂತಹ ಸದ್ವಿಜಾರಗಳು ಪ್ರತಿಯೊಂದು ಮತದಲ್ಲಿರುವ ಧರ್ಮಸಾರ. ಅವುಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು. ಆಳ್ವಾಸ್ ಸಂಸ್ಥೆ ಸರ್ವಧರ್ಮದ ಆಚರಣೆಗೆ ಸಮಾನ ಆಧ್ಯತೆ ನೀಡಿ, ವಿದ್ಯಾರ್ಥಿಗಳಲ್ಲಿ ಸಾಮಾರಸ್ಯದ ಬಗ್ಗೆ ಅರಿವು, ತಮ್ಮ ಧರ್ಮ ಹಾಗೂ ಇತರ ಧರ್ಮದವರ ಮೇಲೆ ಅಭಿಮಾನವನ್ನು ಉಂಟು ಮಾಡುವ ಕೆಲಸ ಮಾಡುತ್ತಿದೆ. ಸಂಶಯ ಹಾಗೂ ಪ್ರೀತಿ ಒಟ್ಟಿಗೆ ಹೋಗಲು ಎಂದಿಗೂ ಸಾಧ್ಯವಾಗಲ್ಲ. ಸಂಶಯವು ನಿವಾರಣೆಯಾಗಿ ಪ್ರೀತಿಯ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದಾಗ ನಿಜಾರ್ಥದ ಶಾಂತಿ ಸಾಮರಸ್ಯ ನೆಲೆಸುತ್ತದೆ ಎಂದರು.
ಮಂಗಳೂರು ವ್ಹೈಟ್ ಡವ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೊರಿನ್ ರಸ್ಕಿನ್ಹ ಅವರ ಸಮಾಜಸೇವೆಯನ್ನು ಗುರುತಿಸಿ ಆಳ್ವಾಸ್ ಸಂಸ್ಥೆಯ ಪರವಾಗಿ ಅವರನ್ನು ಸನ್ಮಾನಿಸಲಾಯತು.
ಕ್ರಿಸ್ಮಸ್ ಸಂಭ್ರಮದ ಪ್ರಯುಕ್ತ ವಿದ್ಯಾಗಿರಿಯಲ್ಲಿರುವ ನುಡಿಸಿರಿ ವೇದಿಕೆಯನ್ನು ನಕ್ಷತ್ರ, ವಿಭಿನ್ನ ರೀತಿಯ ವಿದ್ಯುತ್ ದೀಪಾಲಂಕಾರ, ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗಿತ್ತು. ಸಾಂಸ್ಕøತಿಕ ಕಾರ್ಯಕ್ರಮದ ಅಂಕವಾಗಿ ಆಳ್ವಾಸ್ ವಿದ್ಯಾರ್ಥಿಗಳು ಹಾಗೂ ಮಂಗಳೂರಿನ ಬ್ಲೂ ಏಜೆಂಲ್ಸ್ ತಂಡದಿಂದ ಕ್ರಿಸ್ಮಸ್ ವಿಶೇಷ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.