ಕುಂದಾಪುರ,ಆ 17 (Daijiworld News/RD): ಉದ್ಘಾಟನೆಗೊಂಡು ನಾಲ್ಕೇ ವರ್ಷದಲ್ಲಿ ಕಟ್ಟಡದ ಛಾವಣಿ ಕುಸಿದ ಪರಿಣಾಮ ಕಚೇರಿಯಲ್ಲಿದ್ದ ಒಬ್ಬ ಗಾಯಗೊಂಡು ಉಳಿದವರು ಪವಾಡ ಸದೃಶ ಪಾರಾದ ಘಟನೆ ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ. ಛಾವಣಿ ಕುಸಿತದಿಂದ ಗಾಯಗೊಂಡವರನ್ನು ವಾರಾಹಿ ಪಾಜೆಕ್ಟ್ನ ನಿವೃತ್ತ ಉದ್ಯೋಗಿ ನಾರಾಯಣ ಬಿಲ್ಲವ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಮಿನಿ ವಿಧಾನಸೌಧದ ಮೇಲಂತಸ್ತಿನಲ್ಲಿರುವ ಕುಂದಾಪುರ ಉಪವಿಭಾಗಾಧಿಕಾರಿಯವರ ಸಿಬ್ಬಂದಿಗಳ ಕಚೇರಿಯಲ್ಲಿ ಮೇಲಿನಿಂದ ಛಾವಣಿ ಕುಸಿದು ಬಿದ್ದಿದೆ. ಈ ಸಂದರ್ಭ ಸ್ಥಳದಲ್ಲಿದ್ದ ನಾರಾಯಣ ಬಿಲ್ಲವ ಎಂಬುವರ ಮೇಲೆ ಛಾವಣಿ ಕುಸಿದು ಬಿದ್ದಿದೆ. ಪರಿಣಾಮವಾಗಿ ನಾರಾಯಣ ಬಿಲ್ಲವರ ತಲೆ ಹಾಗೂ ಕೈ ಕಾಲುಗಳಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಎಂಬುವರೂ ಅಲ್ಲಿಯೇ ಇದ್ದರೂ ಅವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.
ನಿರ್ಮಾಣಕ್ಕೆ ಮೊದಲೇ ಬಿರುಕು ಕಾಣಿಸಿಕೊಂಡಿದ್ದ ಕುಂದಾಪುರದ ಮಿನಿ ವಿಧಾನ ಸೌಧ ಉದ್ಘಾಟನೆಗೆ ಮುನ್ನವೇ ತೇಪೆ ಹಚ್ಚಿಕೊಂಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 2015 ರ ಫೆಬ್ರುವರಿ 7 ರಂದು ಉದ್ಘಾಟನೆಗೊಂಡಿತ್ತು. ಮಿನಿವಿಧಾನಸೌಧ ಉದ್ಘಾಟನೆಗೂ ಮುನ್ನವೇ ಪತ್ರಿಕೆ ಹಾಗೂ ಮಾಧ್ಯಮಗಳು ಕಟ್ಟಡದ ಕಳಪೆ ಕಾಮಗಾರಿ ಬಗ್ಗೆ ಬೆಳಕು ಚೆಲ್ಲಿದ್ದವು. ಸಾರ್ವಜನಿಕರೂ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ಪರಿಶೀಲಿಸುವಂತೆ ಮನವಿ ಮಾಡಿದ್ದರು.
ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದರು. ಪರಿಣಾಮವಾಗಿ ಉದ್ಘಾಟನೆಗೊಂಡು ಒಂದೇ ವರ್ಷದಲ್ಲಿ ಮಿನಿವಿಧಾನಸವಧದ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿತ್ತು. ಎರಡನೆ ಮಳೆಗಾಲದಲ್ಲಿ ಕಟ್ಟಡದಲ್ಲಿ ಸೋರಿಕೆ ಕಂಡು ಬಂದಿತ್ತು. ಇದೀಗ ನಾಲ್ಕೇ ವರ್ಷದಲ್ಲಿ ಛಾವಣಿ ಕುಸಿದಿರುವುದು ಆತಂಕ್ಕೆಡೆಮಾಡಿಕೊಟ್ಟಿದ್ದು, ಹಲವು ಇಲಾಖೆಗಳು ಈ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ. ಆದರೆ ಈಗ ಅಧಿಕಾರಿಗಳೂ ಸೇರಿದಂತೆ ಸಿಬ್ಬಂದಿಗಳು ಇಲ್ಲಿ ಕುಳಿತುಕೊಳ್ಳಲು ಭಯಭೀತರಾಗಿದ್ದಾರೆ.