ಮಂಗಳೂರು,ಆ 17 (Daijiworld News/MSP): ತುಳು ನಾಡಿನ ಸಂಸ್ಕೃತಿಯ ಭಾಗವಾಗಿರುವ 'ಭೂತಾರಾಧನೆ, ದೈವರಾಧನೆ' ಬಗ್ಗೆ ಅಪಹಾಸ್ಯ ಮಾಡಿ ಟ್ರೋಲ್ ಮಾಡಿದ ಪೇಸ್ಬುಕ್ ಪೇಜ್ "ಟ್ರೋಲ್ ಹೂ ಟ್ರೋಲ್ ಕನ್ನಡಿಗ" ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಟಿಕೆ ಎನ್ನುವ ಪೇಸ್ಬುಕ್ ಪೇಜ್ "ತುಳುವ ದೇವರುಗಳ ಬಗ್ಗೆ ಅವಹೇಳನಕಾರಿ ಕಾಮೆಂಟ್ಗಳನ್ನು ಪೋಸ್ಟ್ ಮಾಡುವುದು, ಅಸಭ್ಯ ಭಾಷೆ ಬಳಸುವುದು. ಕೀಳುಮಟ್ಟದ ಸಂಸ್ಕೃತಿಯನ್ನು ತೋರ್ಪಡಿಸುತ್ತದೆ. ಈ ಕೃತ್ಯಕ್ಕಾಗಿ ನೀವು ಪಶ್ಚಾತ್ತಾಪ ಪಡುತ್ತೀರಿ ಮತ್ತು ಕರುಣೆಗಾಗಿ ಭಿಕ್ಷೆ ಬೇಡುತ್ತೀರಿ" ಎಂದು ಟ್ರೋಲ್ ಪೇಜ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಟ್ವೀಟ್ ಮಾಡಿದ್ದು " ಸೋಶಿಯಲ್ ಮೀಡಿಯಾದಲ್ಲಿ ತುಳುನಾಡಿನ ದೈವರಾಧನೆಯ ಬಗ್ಗೆ ಅಸಹ್ಯಕರ ಪೋಸ್ಟ್ಗಳು ಹರಿದಾಡುತ್ತಿದೆ. ಇದನ್ನು ಮಾಡುವ ಪ್ರತಿಯೊಬ್ಬರೂ ಸಾಮಾಜಿಕ ಅಸಹಿಷ್ಟುತೆ ಕಾರಣವಾಗುತ್ತಾರೆ ಮತ್ತು ಅಂತವರ ವಿರುದ್ದ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಮಾಜ ವಿರೋಧಿ ಕೃತ್ಯಗಳಲ್ಲಿ ಪಾಲ್ಗೊಳ್ಳಬೇಡಿ, ಸಂಬಂಧಪಟ್ಟ ಅಧಿಕಾರಿಗಳು ನಿಮ್ಮನ್ನು ನೋಡುತ್ತಿದ್ದಾರೆ! ಎಚ್ಚರಿಕೆ ಇರಲಿ ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
ತುಳುನಾಡಿನಲ್ಲಿ ಭೂತಾರಾಧನೆಗೆ ಪ್ರಮುಖ ಸ್ಥಾನ. ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯ ಅವಿಭಾಜ್ಯ ಅಂಗ. ಅದರೂ ಕೆಲವು ಕೀಳು ಮನೋಸ್ಥಿತಿಯ ಜನರು ಸಾಮಾಜಿಕ ಶಾಂತಿ ಕದಡಲು ಇಂತಹ ಅವಹೇಳನಕಾರಿಯಾಗಿ ಸಂದೇಶ ಕಳುಹಿಸುತ್ತಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿಬರುತ್ತಿದೆ.