ವಿಜಯಪುರ, ಡಿ 22: ವಿಜಯಪುರದಲ್ಲಿ ಶಾಲೆಗೆ ತೆರಳುತ್ತಿದ್ದ ಒಂಭತ್ತನೇ ತರಗತಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಬಾಲಕಿ ಅತ್ಯಾಚಾರ ಖಂಡಿಸಿ ವಿಜಯಪುರದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ವಿವಿಧ ಮಹಿಳಾ ಸಂಘನೆಗಳು, ಸಂಘ ಸಂಸ್ಥೆಗಳಿಂದ ಸರಣಿ ಪ್ರತಿಭಟನೆಗಳು ನಡೆಯುತ್ತಿದೆ. ಬಾಲಕಿಯ ಹತ್ಯೆ ಖಂಡಿಸಿ ಬಿಜೆಪಿ, ಎಬಿವಿಪಿ, ಎಸ್ಡಿಪಿಐ ಸೇರಿದಂತೆ ನಾನಾ ದಲಿತ ಸಂಘಟನೆಗಳು ಹಾಗೂ ಶಾಲಾ-ಬಾಲಕಿಯರು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದು, ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸಿ, ಬಾಲಕಿಯ ಕುಟುಂಬಕ್ಕೆ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಪ್ರಕರಣವನ್ನು ಸರಕಾರ ಸಿಐಡಿಗೆ ಹಸ್ತಾಂತರಿಸಿದ್ದು, ಸಿಐಡಿ ಅಧಿಕಾರಿಗಳು ವಿಜಯಪುರಕ್ಕೆ ತೆರಳಿ ಇಂದು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷಾ ವರದಿಯನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳಹಿಸಿಕೊಡಲಾಗಿದೆ.
ಡಿಎಸ್ಪಿ ಡಿ.ಅಶೋಕ ನೇತೃತ್ವದಲ್ಲಿ ವಿಶೇಷ ತಂಡಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿವೆ. ಈಗಾಗಲೇ ಐವರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ದೀಪಕ್ ಮುಳಸಾವಳಗಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಎಸ್ಪಿ ಕುಲದೀಪ ಜೈನ್ ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳ ಕುಟುಂಬ ಸದಸ್ಯರಿಗೆ, ಬಾಲಕಿಯನ್ನು ಹತ್ಯೆ ಮಾಡಿದ ನಿವಾಸ ಹಾಗೂ ಆಕೆ ಓದುತ್ತಿದ್ದ ಮಲ್ಲಿಕಾರ್ಜುನ ಪ್ರೌಢಶಾಲೆಗೆ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಇದ್ದರೂ ಅದೇ ಹೊತ್ತಿನಲ್ಲಿ ಬಾಲಕಿಯನ್ನು ಮನೆಗೆ ಊಟಕ್ಕೆ ತೆರಳಲು ಬಿಟ್ಟಿರುವುದು, ಘಟನೆ ಬಳಿಕವೂ ಇಲಾಖೆ ಅಧಿಕಾರಿಗಳು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ವಿಷಯ ತಿಳಿಸದೇ ಕರ್ತವ್ಯಲೋಪ ಎಸಗಿದ ಮಲ್ಲಿಕಾರ್ಜುನ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ ಮುಳವಾಡ ಹಾಗೂ ಹಿರಿಯ ಶಿಕ್ಷಕ ಜಿ.ಆರ್.ಬಿರಾದಾರ ಅವರನ್ನು ಶ್ರೀಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಮಾನತುಗೊಳಿಸಿದೆ.