ಮಂಗಳೂರು,ಆ 18 (Daijiworld News/RD): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆಗಳು ಬಂದಿದೆ ಎಂಬ ಆತಂಕಕಾರಿ ಅಂಶ ತಿಳಿದು ಬಂದಿದ್ದು, ಆದರೆ ಇದು ಸುಳ್ಳು ವದಂತಿ ಪಾಕ್ ಗೆ ಯಾವುದೇ ರೀತಿಯ ಸ್ಯಾಟ್ಲೈಟ್ ಕರೆ ಹೋಗಿಲ್ಲ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯ ಸಂಬಂಧ ಹೈಅಲರ್ಟ್ ಘೋಷಣೆ ಬೆನ್ನಲ್ಲೇ, ದೆಹಲಿಯಲ್ಲಿ ಸೆರೆಸಿಕ್ಕ ಉಗ್ರನೊಬ್ಬ ಬೆಳ್ತಂಗಡಿಯಿಂದ ಪಾಕ್ಗೆ ಸ್ಯಾಟ್ಲೈಟ್ ಕರೆ ಹೋಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕರಾವಳಿಗೆ ಬಂದು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ದೂರವಾಣಿ ಕರೆ ಮೂಲಕ ಸ್ಪಷ್ಟನೆ ನೀಡಿರುವ ಲಕ್ಷ್ಮೀ ಪ್ರಸಾದ್, ಅಂತಹ ಯಾವುದೇ ಘಟನೆ ಆಗಿಲ್ಲ. ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಜಿಲ್ಲೆಗೆ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳು, ಆಸ್ಪತ್ರೆ, ಬ್ಯಾಂಕ್, ಶಿಕ್ಷಣ ಸಂಸ್ಥೆಗಳು, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಇನ್ನು ಬೆಂಗಳೂರಿನಲ್ಲೂ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ನಗರದಲ್ಲೂ ಪೊಲೀಸರು ಹೈ ಅಲರ್ಟ್ ವಹಿಸಿಕೊಂಡಿದ್ದು, ಎಲ್ಲಾ ಕಡೆಗಳಲ್ಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಎಲ್ಲಾ ಕಡೆ ತಪಾಸಣೆ ನಡೆಸಲಾಗುತ್ತಿದೆ.