ಬೆಳ್ತಂಗಡಿ,ಆ 18 (Daijiworld News/RD): ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಉಂಟಾದ ನೆರೆ ಪ್ರವಾಹ ಅನಿರೀಕ್ಷಿತವಾದುದು. ಜನ ಆತಂಕಕ್ಕೆ ಒಳಗಾಗಬೇಡಿ. ಸಂತ್ರಸ್ತರ ಪರವಾಗಿ ಪ್ರಾಮಾಣಿಕವಾಗಿ ಧ್ವನಿಗೂಡಿಸಿ ಸರ್ಕಾರದ ಮನವೊಲಿಸಿ ನಿರಾಶ್ರಿತರಿಗೆ ಸೂಕ್ತ ಪರಿಹಾರ ಸಿಗುವ ಹಾಗೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ತಾಲೂಕಿನ ನಿರಾಶ್ರಿತರ ಪರಿಹಾರ ಕೇಂದ್ರವಾದ ಚಾರ್ಮಾಡಿ ಪಂಚಾಯಿತಿಗೆ ಭೇಟಿ ನೀಡಿ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಚಾರ್ಮಾಡಿ ಭಾಗದಲ್ಲೇ ಸುಮಾರು 65 ಮನೆಗಳು ಭಾಗಶಃ ನಾಶವಾಗಿದ್ದು, ಐದಾರು ಮನೆಗಳು ಸಂಪೂರ್ಣ ನಾಶವಾಗಿದೆ ಎಂಬ ಮಾಹಿತಿ ಇದೆ. ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಮತ್ತೆ ತಾಲೂಕಿಗೆ ಭೇಟಿ ನೀಡಿ ಜನರ ಸಂಕಷ್ಟವನ್ನು ಆಲಿಸುತ್ತೇನೆ. ಕೊಡಗು ಭಾಗದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ತಾನು ಅಧಿಕಾರದಲ್ಲಿದ್ದು ಅಲ್ಲಿಯ ನಿರಾಶ್ರಿತರಿಗೆ ವ್ಯವಸ್ಥಿತವಾದ ಮನೆಗಳನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಅದೇ ಮಾದರಿಯಲ್ಲಿ ತಾಲೂಕಿನ ನಿರಾಶ್ರಿತರಿಗೂ ಸಿಗಬೇಕು’ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 5 ಲಕ್ಷ ಪರಿಹಾರ, ಭಾಗಶಃ ಕಳೆದುಕೊಂಡವರಿಗೆ 1 ಲಕ್ಷ ಪರಿಹಾರ ಎಂದು ಘೋಷಣೆ ಮಾಡಿದ್ದಾರೆ. ಆದರೆ 5 ಲಕ್ಷ ರೂಪಾಯಿಯಲ್ಲಿ ಮನೆ ನಿರ್ಮಿಸಲು ಅಸಾಧ್ಯವಾಗಿದ್ದು ಒಂದು ವ್ಯವಸ್ಥಿತವಾದ ಮನೆ ನಿರ್ಮಿಸಲು ಕನಿಷ್ಠ 10 ರಿಂದ 12 ಲಕ್ಷ ಪರಿಹಾರದ ಅಗತ್ಯವಿದೆ. ಭಾಗಶಃ ಮನೆ ಕಳೆದುಕೊಂಡವರಿಗೆ ತಕ್ಷಣ 1 ಲಕ್ಷ ಬಿಡುಗಡೆ ಮಾಡಬೇಕು ಎಂದರು.ಋಣಮುಕ್ತ ಪರಿಹಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ವರ್ಷಕ್ಕೆ ರೂ. 1.20 ಲಕ್ಷ ವರಮಾನವಿರುವವರಿಗೆ ಮಾತ್ರ ಇದು ಅನ್ವಯವಾಗುವುದು. ಅಂತಹ ವ್ಯಕ್ತಿಗಳು ಖಾಸಗಿ ಸಾಲ ಪಡೆದುಕೊಂಡಿದ್ದರೆ ಉಪ ವಿಭಾಗಾಧಿಕಾರಿ ಕಚೇರಿಗೆ ಹೋಗಿ 60 ದಿನಗಳ ಒಳಗೆ ಅರ್ಜಿಯನ್ನು ನೀಡಿದ್ದೇ ಅದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.ಸಂತ್ರಸ್ತರ ಪರವಾಗಿ ಜನಾರ್ದನ ಮತ್ತು ಶಕುಂತಳಾ ಮಾತನಾಡಿ, ’ಮನೆ ಮಾತ್ರವಲ್ಲ ಕೃಷಿ ಭೂಮಿಯನ್ನೂ ಕಳೆದುಕೊಂಡಿದ್ದೇವೆ. ಜಾನುವಾರುಗಳನ್ನು ಯಾರದೋ ಮನೆಯಲ್ಲಿ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಬದುಕು ಹೇಗೆ ಸಾಗುವುದೋ ಎಂಬ ಆತಂಕ ನಿರ್ಮಾಣವಾಗಿದೆ’ ಎಂದರು. ಇದೇ ಸಂದರ್ಭ ನಿರಾಶ್ರಿತರಿಗೆ ಆಹಾರ ಸಾಮಾಗ್ರಿ ಜೊತೆ ಅಗತ್ಯ ವಸ್ತುಗಳನ್ನು ನೀಡಿದರು.
ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಉಪಾಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂ ದೇವಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಮ ಆಚಾರಿ, ಸಂಘಟನಾ ಕಾರ್ಯದರ್ಶಿ ನಾಗರಾಜ ಹೆಚ್.ಎನ್ ಮತ್ತು ಪ್ರಕಾಶ್ ಹೆಬ್ಬಾರ್, ಯುವ ಜನತಾದಳ ಅಧ್ಯಕ್ಷ ಸೂರಜ್ ವಳಂಬ್ರ, ಜನತಾದಳ ಯುವ ವಿಭಾಗದ ನಗರ ಅಧ್ಯಕ್ಷ ಪುನೀತ್ ಸುವರ್ಣ ಬೆಳ್ತಂಗಡಿ, ಮುಖಂಡರಾದ ಆಬಿದ್ ಆಲಿ, ಚಂಚಲಾಕುಂದರ್, ಲೋಕೇಶ್ ರಾವ್, ಗುರುರಾಜ್, ಶಾಹಿದ್, ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್ ಗಣಪತಿಶಾಸ್ತ್ರಿ, ಲೋಕೋಪಯೋಗಿ ಇಲಾಖೆಯ ಶಿವಪ್ರಸಾದ ಅಜಿಲ, ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಪಿಡಿಒ ಪ್ರಕಾಶ್ ಶೆಟ್ಟಿ ಇದ್ದರು.