ಮಂಗಳೂರು, ಆ 18 (DaijiworldNews/SM): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ಫೋನ್ ಕದ್ದಾಳಿಕೆ ವಿಚಾರದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳು ನನ್ನನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಮಾಧ್ಯಮಗಳು ನನ್ನ ಮತ್ತು ಜನತೆಯ ನಡುವೆ ಅವಿಶ್ವಾಸ ಮೂಡಿಸಲು ಯತ್ನಿಸುತ್ತಿವೆ. ನಾನು ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ಮೀಡಿಯಾಗಳ ಒತ್ತಡಕ್ಕೆ ಬಗ್ಗುವುದಿಲ್ಲ. ಮಾಧ್ಯಮಗಳು ಏನು ಬೇಕಾದರೂ ತೋರಿಸಲಿ. ಮಾಧ್ಯಮಗಳು ಫೋನ್ ಕದ್ದಾಳಿಕೆಯ ಸ್ಟೋರಿ ಮಾಡಿ ಬಿಲ್ಡಪ್ ತೆಗೆಯುವ ಪ್ರಯತ್ನದಲ್ಲಿವೆ. ಆದರೆ, ಇದರಲ್ಲಿ ಮಾಧ್ಯಮಗಳು ಯಶಸ್ವಿಯಾಗಲ್ಲ ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ.