ಕಾಸರಗೋಡು,ಆ 19 (Daijiworld News/RD): ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಮರಳು ಸಾಗಾಟ ನಡೆಸುತ್ತಿದ್ದು , ಇದರಿಂದ ಸ್ಥಳಿಯಯರಲ್ಲಿ ಆತಂಕ ಮನೆ ಮಾಡಿದೆ.
ಪರಿಸರವಾಸಿಗಳನ್ನು ಬೆದರಿಸಿ ರಾತ್ರಿ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಮರಳನ್ನು ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದ್ದು , ಮರಳು ಸಾಗಾಟಕ್ಕೆ ಪೊಲೀಸರ ಹಾಗೂ ಕೆಲ ರಾಜಕಾರಣಿಗಳ ಬೆಂಬಲ ಇದೆ ಎಂಬ ಆರೋಪ ಕೂಡಾ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳ ಗಮನೆಕ್ಕೆ ಹಲವು ಬಾರೀ ತಂದರೂ ಅಕ್ರಮ ಮರಳು ಗಾರಿಕೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ . ಇದರಿಂದಾಗಿ ಪರಿಸರವಾಸಿಗಳು ಅಕ್ರಮ ಮರಳು ಗರಿಕೆ ನಡೆಸುತ್ತಿದ್ದ ಲಾರಿಗಳನ್ನು ರಾತ್ರೋ ರಾತ್ರಿ ತಡೆದಿದ್ದು, ಸ್ಥಳೀಯರನ್ನು ಮಾರಕಾಸ್ತ್ರ ತೋರಿಸಿ ಬೆದರಿಸಿ ತಡೆಹಿಡಿದಿದ್ದ ಲಾರಿ ಗಳನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು.
ಒಂದು ಲಾರಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆದರೂ ಮರಳು ಮಾಫಿಯಾ ದ ಅಟ್ಟಹಾಸ ಮುಂದುವರಿದಿದ್ದು ಆದಿತ್ಯವಾರ ಮಧ್ಯಾಹ್ನದ ವೇಳೆಗೆ ಅಂಜಾರೆಯ ಫೆಲಿಕ್ಸ್ ಡಿ ಸೋಜ ರವರ ಮನೆಗೆ ನುಗ್ಗಿದ್ದ ಐವರ ತಂಡವು ದಾಂಧಲೆ ನಡೆಸಿ ಮನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ .ಹಲ್ಲೆಯಿಂದ ಫೆಲಿಕ್ಸ್ ಡಿ ಸೋಜ ರವರ ಪತ್ನಿಗೆ ಗಂಭೀರ ಗಾಯಗಳಾಗಿವೆ. ಕಲ್ಲುಗಳನ್ನು ಎಸೆದು ಮನೆಯ ಕಿಟಿಕಿ ಗಾಜು ಹಾಗೂ ವಸ್ತುಗಳನ್ನು ಹಾನಿಗೊಳಿಸಿದ್ದು , ರೀಟಾ ಡಿ ಸೋಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಮರಳು ಮಾಫಿಯಾ ಕಿರುಕುಳ ಇಷ್ಟಕ್ಕೂ ಮುಗಿದಿಲ್ಲ. ಮರಳು ಲಾರಿಗಳ ಅಟ್ಟಹಾಸದಿಂದ ಈ ಪ್ರದೇಶಕ್ಕೆ ಹೋಗುವ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ . ರಸ್ತೆ ಬದಿಯಲ್ಲಿರುವ ಮನೆಗಳಿಗೆ ಹಾನಿಗೊಳಿಸುತ್ತಿದೆ. ಎರಡು ದಿನಗಳ ಹಿಂದೆ ಮನೆಯೊಂದರ ಗೇಟನ್ನು ಮುರಿದು ಹಾಕಿತ್ತು . ಇದೆ ರೀತಿ ಪರಿಸರವಾಸಿಗಳನ್ನು ಬೆದರಿಸಿ , ಭಯವನ್ನು ಹುಟ್ಟಿಸಿ ಅಕ್ರಮ ಮರಳು ಸಾಗಾಟ ನಡೆಯುತ್ತಲೇ ಇದೆ .
ಮಂಜೇಶ್ವರ ಅಂಜಾರೆ ಯಿಂದ ಚರ್ಚ್ ಬೀಚ್ ತನಕ ಸುಮಾರು ಎರಡು ಕಿಲೋಮೀಟರ್ ಗಳಷ್ಟು ಸಮುದ್ರ ತೀರವನ್ನು ಸುಮಾರು ಎರಡು ಮೀಟರ್ ಗಳಷ್ಟು ಆಳದಲ್ಲಿ ಮರಳು ಮಾಫಿಯಾ ಮರಳು ಅಗೆದು ಈಗಾಗಲೇ ಸಾಗಾಟ ಮಾಡಿದೆ . ಈ ಪರಿಸರದಲ್ಲಿನ 300 ರಷ್ಟು ಮನೆ ಗಳಿದ್ದು ಸಾವಿರ ಕ್ಕೂ ಅಧಿಕ ಮಂದಿ ವಾಸವಾಗಿದ್ದು, ಮರಳು ಮಾಫಿಯಾದ ಅಟ್ಟಹಾಸದಿಂದ ಭಯದಲ್ಲೇ ಕಾಲ ಕಳೆಯುವಂತೆ ಮಾಡಿದೆ.
ಕಡಲ್ಕೊರೆತದಿಂದ ಹಲವಾರು ಮನೆಗಳು ಕಡಲು ಪಾಲಾಗುತ್ತಿರುವುದು ದಿನ ನಿತ್ಯದ ದೃಶ್ಯವಾಗಿದ್ದರೂ ಕುಂಡುಕೊಳಕೆ ಬೀಚ್ ಪರಿಸರದಿಂದ ತೆಗೆದ ಮರಳಿನಿಂದಾಗಿ ಅಲ್ಲಲ್ಲಿ ಆಳವಾದ ಹೊಂಡ ಸೃಷ್ಟಿಯಾಗಿದೆ. ಇದೆಲ್ಲವನ್ನೂ ಕಂಡೂ ಕಾಣದಂತೆ ನಟಿಸುತ್ತಿರುವ ಕಾನೂನು ಪಾಲಕರ ವಿರುದ್ಧ ನಾಗರಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.