ವಿಶೇಷ ವರದಿ: ಅನುಷ್ ಪಂಡಿತ್
ಮಂಗಳೂರು, ಆ.19(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಗೆ ಒಂದೆಡೆ ಪ್ರಕೃತಿ ಮುನಿದರೆ, ಇನ್ನೊಂದೆಡೆ ಮಾನವ ನಿರ್ಮಿತ ಮಹಾದುರಂತವೇ ನಡೆದು ಹೋಗಿದೆ. ಪಚ್ಚನಾಡಿ ಡಂಪಿಂಗ್ಯಾರ್ಡ್ನ ತ್ಯಾಜ್ಯ ರಾಶಿ ಕೆಳಕ್ಕೆ ಸರಿದು ಇಡೀ ಮಂದಾರ ಎನ್ನುವ ಊರನ್ನೇ ನಿರ್ನಾಮ ಮಾಡಿದೆ. ಅತ್ತ ಬೆಳ್ತಂಗಡಿಯ ಮಂದಿ ಬದುಕು ಕತ್ತಲಾಗಿದ್ದು, ಜೀವನ ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾರೆ.
ಬೆಳ್ತಂಗಡಿಯ ಬಾಂಜಾರು ಮಲೆ, ಕಿವೂರು, ಚಾರ್ಮಾಡಿ, ದಿಡುಪೆ ಪ್ರದೇಶದಲ್ಲಿ ಪ್ರವಾಹದಿಂದ ಉಂಟಾದ ದುರಂತದಲ್ಲಿ ಸಾವು, ನೋವಿನ ಜತೆಗೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಸಂತ್ರಸ್ತರು ಮನೆ ಮಠ, ಜಾನುವಾರು ಕಳೆದುಕೊಂಡಿದ್ದಾರೆ. ಗಂಜಿ ಕೇಂದ್ರ, ಬಂಧುಗಳ ಮನೆ ಸೇರಿದ್ದಾರೆ. ಮಕ್ಕಳಿಗೆ ಶಾಲೆ ಇಲ್ಲ, ದೊಡ್ಡವರಿಗೆ ನೌಕರಿಯಿಲ್ಲ. ಮನೆ ದಾಖಲೆ ಪತ್ರಗಳೂ ಇಲ್ಲ. ಶಾಲಾ ಮಕ್ಕಳ ಪುಸ್ತಕ ಕೂಡ ನೆರೆನೀರಿನಲ್ಲಿ ಕೊಚ್ಚಿ ಹೋಗಿದೆ.
ಬೆಳ್ತಂಗಡಿಯ ಲೈಲಾ ಗ್ರಾಮದಲ್ಲಿ ಹೆಣ್ಣು ಮಗಳೊಬ್ಬಳಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಇನ್ನೇನು ಹೊಸ ಬಾಳಿನ ಕನಸಿನಲ್ಲಿರಬೇಕಾದ ಆಕೆ ಬಾಳಲ್ಲಿ ಮಳೆ ರೂಪದಲ್ಲಿ ಶನಿ ವಕ್ಕರಿಸಿದೆ. ಮಳೆಯ ತತ್ತರದಲ್ಲಿ ಕುಟುಂಬ ದಾರಿ ತೋಚದೇ ಕಗ್ಗತ್ತಲ ಜೀವನದಲ್ಲಿ ಮುಳುಗಿದೆ. ಇನ್ನೊಂದೆಡೆ ಶೂನ್ಯದಿಂದ ಜೀವನ ಕಟ್ಟಬೇಕಾಗಿದೆ.
ಪಚ್ಚನಾಡಿಯ ಮಂದಾರ ತ್ಯಾಜ್ಯ ಪ್ರವಾಹ ಹರಿದು 29 ಕುಟುಂಬಗಳು ಬೀದಿ ಪಾಲಾಗಿವೆ. ತ್ಯಾಜ್ಯದ ಸುನಾಮಿಯಿಂದ ಇದೀಗ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಂದಾರ ಪ್ರಾಕೃತಿಕ ದುರಂತವಾಗುತ್ತಿದ್ದರೆ, ಹಕ್ಕಿಗಳು, ಪ್ರಾಣಿಗಳಾದರೂ ಮುನ್ಸೂಚನೆ ನೀಡುತ್ತಿದ್ದವೇನೋ...? ಆದರೆ ಇದು ಮಾನವ ನಿರ್ಮಿತ ಆಗಿದ್ದರಿಂದ ಯಾರಿಗೂ ಸುಳಿವೇ ಸಿಗಲಿಲ್ಲ. ಬದುಕು ಬಿಡಿ, ತ್ಯಾಜ್ಯ ನೀರೇ ಕುಡಿಯುವ ದುರ್ಗತಿ ಇವರದ್ದು.
ಪ್ರಸ್ತುತ ಬೈತುರ್ಲಿಯಲ್ಲಿರುವ ಕರ್ನಾಟಕ ಸರಕಾರದ ಆಶ್ರಯ ಕೇಂದ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಅಹವಾಲು ಸ್ವೀಕರಿಸಿ ಭವಿಷ್ಯಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ತ್ಯಾಜ್ಯ ತೆರವಿಗಾಗಿ ಪರಿಶೀಲನೆ ನಡೆಸಲು ವಿಶೇಷ ತಂಡ ಮಂದಾರಕ್ಕೆ ಭೇಟಿ ನೀಡಲಿದೆ. ವಾರಕ್ಕೊಮ್ಮೆ ಖುದ್ದು ನಾನೇ ಬಂದು ಪರಿಶೀಲನೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ನಾಶವಾಗಿದೆ. ಚಾರ್ಮಾಡಿಘಾಟ್ ಜನತೆ ಗುಡ್ಡ ಕುಸಿದ ಪರಿಣಾಮ ಹೊರ ಪ್ರಪಂಚದ ದಾರಿಯನೇ ಕಾಣದಂತಾಗಿದ್ದಾರೆ. ಎಲ್ಲಾ ಸಮಸ್ಯೆಗಳನ್ನೂ ಸರಕಾರ ತ್ವರಿತಗತಿಯಲ್ಲಿ ಪರಿಹಾರ ನೀಡಲು ಮುಂದಾಗಬೇಕಾಗಿದೆ. ಅದಕ್ಕೂ ಮಿಗಿಲಾಗಿ ನಾಡಿನ ಜನತೆಯ ಬೆಂಬಲ ಇವರಿಗೆ ಬೇಕಾಗಿದೆ.