ಕಾಸರಗೋಡು,ಆ 19 (Daijiworld News/RD): ಮಂಜೇಶ್ವರ ಕುಂಡುಕೊಳಕೆ ಪರಿಸರದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಮುಂದುವರಿದಿದ್ದು , ಆದಿತ್ಯವಾರ ಅಂಜಾರೆಯ ಮನೆಯೊಂದಕ್ಕೆ ನುಗ್ಗಿದ ಮರಳು ಮಾಫಿಯಾ ತಂಡವು ದಾಂಧಲೆ ನಡೆಸಿದ್ದು, ಮನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಮಧ್ಯಾಹ್ನ ಮನೆಗೆ ನುಗ್ಗಿದ ತಂಡವು ಮನೆ ಮಾಲಕ ಫೆಲಿಕ್ಸ್ ಡಿ ಸೋಜ ಹಾಗೂ ಪತ್ನಿ ರೀಟಾ ಡಿ ಸೋಜ ರವರ ಮೇಲೆ ಹಲ್ಲೆ ನಡೆಸಿದ್ದು, ರೀಟಾ ಡಿ ಸೋಜ ಗಂಭೀರ ಗಾಯಗೊಂಡಿದ್ದಾರೆ . ರೀಟಾ ಡಿ ಸೋಜರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ ಮನೆಗೆ ನುಗ್ಗಿದ ತಂಡವು ಕಲ್ಲು , ಮರದ ತುಂಡುಗಳಿಂದ ಹಲ್ಲೆ ನಡೆಸಿದೆ . ಬಳಿಕ ತಂಡವು ಮನೆಯ ಕಿಟಿಕಿ ಗಾಜುಗಳನ್ನು ಹುಡಿ ಮಾಡಿದ್ದು , ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಹಾನಿಗೊಳಿಸಿದೆ . ಕುಂಡುಕೊಳಕೆ ಬೀಚ್ ಪರಿಸರದಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು , ಎರಡು ದಿನಗಳ ಹಿಂದೆ ನಾಗರಿಕರು ತಡೆದು ಪೊಲೀಸರಿಗೊಪ್ಪಿಸಿದ್ದರು. ಅಕ್ರಮ ಮರಳು ಗಾರಿಕೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು . ಈ ನಡುವೆ ಮರಳು ಮಾಫಿಯಾ ಮತ್ತೆ ದಾಂಧಲೆ ನಡೆಸಿದೆ . ರೀಟಾ ಡಿ ಸೋಜ ಕುಂಡುಕೊಳಕೆ ಯ ನೌಫಾಲ್ ಹಾಗೂ ಮೋನು ಸೇರಿದಂತೆ ಐದು ಮಂದಿ ವಿರುದ್ಧ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಮಂಜೇಶ್ವರ ಅಂಜಾರೆಯಿಂದ ಮೀಟರ್ ಗಳಷ್ಟು ದೂರದ ತನಕ ಸುಮಾರು ಎರಡು ಮೀಟರ್ ಗಳಷ್ಟು ಆಳದಲ್ಲಿ ಮರಳು ಅಗೆದು ಕೊಂಡೊಯ್ಯಲಾಗಿದ್ದು, ಈ ಪರಿಸರದಲ್ಲಿ ವಾಸವಾಗಿರುವ 300 ರಷ್ಟು ಮನೆಗಳ ಸಾವಿರಕ್ಕೂ ಅಧಿಕ ಮಂದಿ ಮರಳು ಮಾಫಿಯಾದ ಭಯದ ನಡುವೆ ಬದುಕು ಸ್ಥಿತಿ ನಿರ್ಮಾಣವಾಗಿದೆ . ಮಂಜೇಶ್ವರ ಕುಂಡು ಕೊಳಕೆ ಬೀಚ್ ಪರಿಸರದಿಂದ ರಾತ್ರಿ ಅವ್ಯಾಹತವಾಗಿ ಸಾಗುತ್ತಿರುವ ಅಕ್ರಮ ಮರಳು ಸಾಗಾಟವನ್ನು ತಡೆಯಲು ಪರಿಸರ ವಾಸಿಗಳು ಕಾನೂನು ಪಾಲಕರಲ್ಲಿ ಹಲವು ಬಾರಿ ಆಗ್ರಹಿಸಿದ್ದರೂ ಈ ಬಗ್ಗೆ ಗಮನ ಹರಿಸದ ಕಾನೂನು ಪಾಲಕರ ವಿರುದ್ಧ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಮುಂಜಾನೆ ಯುವಕರು, ವೃದ್ಧರು, ಮಹಿಳೆಯರು ಸೇರಿ ಮರಳು ಸಾಗಾಟ ಮಾಡುತ್ತಿರುವ ಟಿಪ್ಪರ್ ಲಾರಿಗಳನ್ನು ತಡೆದಿದ್ದಾರೆ.
ಈ ಸಂದರ್ಭ ರೊಚ್ಚಿಗೆದ್ದ ಮರಳು ಮಾಫಿಯಾ ತಂಡ ಮಾರಕಾಯುಧಗಳಿಂದ ಊರವರನ್ನು ಆಕ್ರಮಿಸಲು ಬಂದಿದ್ದಾರೆ. ಮಾತ್ರ ವಲ್ಲದೆ ಸ್ಥಳೀಯ ನಿವಾಸಿಯೊಬ್ಬರ ಮನೆ ಯವರ ಗೇಟನ್ನು ಮುರಿದು ಹಾಕಿ ಅವರಿಗೆ ಹಲ್ಲೆಗೈದಿರು ವುದಾಗಿ ದೂರಲಾಗಿದೆ. ಮಾತ್ರವಲ್ಲದೆ ತಡೆ ಹಿಡಿದ 5 ವಾಹನಗಳ ಪೈಕಿ ನಾಲ್ಕು ಟಿಪ್ಪರ್ ಲಾರಿಗಳನ್ನು ಬಲ ಪ್ರಯೋಗಿಸಿ ಕೊಂಡು ಹೋಗಿ ಊರವರಿಗೆ ಜೀವ ಬೆದರಿಕೆ ಹಾಕಿ ದ್ದರು. ಊರವರು ತಡೆದ 5 ವಾಹನಗಳ ಪೈಕಿ ಒಂದು ವಾಹನವನ್ನು ಊರವರು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿ ಸಿದ್ದರು ಕಡಲ್ಕೊರೆತದಿಂದ ಹಲವಾರು ಮನೆಗಳು ಕಡಲು ಪಾಲಾಗುತ್ತಿರುವುದು ದಿನ ನಿತ್ಯದ ದೃಶ್ಯವಾಗಿದ್ದರೂ ಕುಂಡುಕೊಳಕೆ ಬೀಚ್ ಪರಿಸರದಿಂದ ತೆಗೆದ ಮರಳಿನಿಂದಾಗಿ ಅಲ್ಲಲ್ಲಿ ಆಳವಾದ ಹೊಂಡ ಸೃಷ್ಟಿಯಾಗಿದೆ. ಇದೆಲ್ಲವನ್ನೂ ಕಂಡೂ ಕಾಣದಂತೆ ನಟಿಸುತ್ತಿರುವ ಕಾನೂನು ಪಾಲಕರ ವಿರುದ್ಧ ನಾಗರಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.