ಬೆಳ್ಳಾರೆ ಡಿ 22: ಬೆಂಗಳೂರಿನ ವಿದ್ಯಾರಣ್ಯಪುರದ ಬೊಮ್ಮಸಂದ್ರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದು 11 ವರ್ಷದ ಬಾಲಕನನ್ನು ಕಟ್ಟಿ ಹಾಕಿ ರೂ.20 ಸಾವಿರ ನಗದು ಹಾಗೂ 30 ಗ್ರಾಂ ಚಿನ್ನ ದೋಚಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು ಮೂಲದ ನಿವಾಸಿಗಳಿಬ್ಬರನ್ನು ಬೆಂಗಳೂರು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಸವಣೂರು ಹಸೈನಾರ್ರವರ ಮಗ ಮಹಮ್ಮದ್ ನಾಸಿರ್ ಹಾಗೂ ಶಾಂತಿನಗರ ಹಸಕುಟ್ಟಿಯವರ ಮಗ ಅಬ್ದುಲ್ಲಾ ಬಂಧಿತ ಆರೋಪಿಗಳು. ವಿದ್ಯಾರಣ್ಯಪುರ ವೆಂಕಟಪ್ಪ ಲೇಔಟ್ ನಿವಾಸಿ ಲಾವಣ್ಯ ಅವರ ಮನೆಯಲ್ಲಿ ಡಿ.14 ರಂದು ದರೋಡೆ ನಡೆದಿದ್ದು, ಇವರ ಪುತ್ರ ರಾಕೇಶ್(11) ಎಂಬವನ ಮೇಲೆ ಹಲ್ಲೆ ನಡೆಸಿ ಈ ಕೃತ್ಯ ಎಸಗಿದ್ದರು. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಸಿರ್ ಹಾಗೂ ಅಬ್ದುಲ್ಲಾ ವನ್ನಾರಪೇಟೆ ಎಂಬಲ್ಲಿ ದೇವಸ್ಥಾನದಿಂದ ಕಳವು ನಡೆಸಿ ತೆರಳುತ್ತಿದ್ದ ವೇಳೆ ವಿವೇಕನಗರ ಪೊಲೀಸರಿಗೆ ಸಿಕ್ಕಿ ಬಿದ್ದು, ವಿಚಾರಣೆ ವೇಳೆ ತಾವು ಈ ಹಿಂದೆ ಬೊಮ್ಮಸಂದ್ರ ಲಾವಣ್ಯರ ಮನೆಯಲ್ಲಿ ನಡೆಸಿದ ಕಳ್ಳತನದ ಕುರಿತು ಬಾಯಿ ಬಿಟ್ಟಿದ್ದಾರೆ.
ಪರಿಚಯವಿದ್ದಾತನ ಕೃತ್ಯ
ಪ್ಲಿಪ್ ಕಾರ್ಟ್ ಕಂಪೆನಿಯಲ್ಲಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಾಸಿರ್ನ ಪರಿಚಯ ಲಾವಣ್ಯರಿಗಿದ್ದು, ಆಗಾಗ ಆಕೆಯ ಮನೆಗೆ ಹೋಗಿಬರುತ್ತಿದ್ದ ಎನ್ನಲಾಗುತ್ತಿದೆ. ೪ ವರ್ಷಗಳ ಇವರ ಪರಿಚಯ ಪ್ರೀತಿಗೆ ತಿರುಗಿತ್ತು ಎಂದು ನಾಸಿರ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಲಾವಣ್ಯ ಇದನ್ನು ನಿರಾಕರಿಸಿದರು ಎಂದು ವಿವೇಕನಗರ ಠಾಣಾಧಿಕಾರಿ ಮಾಹಿತಿ ನೀಡಿದರು.
ನಾಸಿರ್ ಹೆಸರು ಹೇಳದ ಲಾವಣ್ಯ
ಲಾವಣ್ಯ ತನ್ನ ಮನೆಯಲ್ಲಿ ಕಳ್ಳತನ ನಡೆಸಿದ್ದು ಪರಿಚಯಸ್ಥನಿಂದಲೇ ಎಂದು ಗೊತ್ತಿದ್ದರೂ ಈ ಕುರಿತು ಪೊಲೀಸ್ ಠಾಣೆಯಲ್ಲಿ ಲಾವಣ್ಯ ಮಾಹಿತಿ ನೀಡಿರಲಿಲ್ಲ. ನಾಸಿರ್ ಜೊತೆಗಿನ ಪ್ರೀತಿಯ ವಿಚಾರ ಬಹಿರಂಗ ಆದೀತು ಎನ್ನುವ ಕಾರಣಕ್ಕಾಗಿ ದೂರುದಾರೆ ನಾಸಿರ್ ವಿಚಾರವನ್ನು ಮುಚ್ಚಿಟ್ಟಿದ್ದಳು ಎನ್ನಲಾಗುತ್ತಿದೆ.
ಹಲವು ಪ್ರಕರಣ
ಸವಣೂರಿನಲ್ಲಿ ಕಾಂಕ್ರೀಟ್ ಮಿಕ್ಸರ್ ಕಳ್ಳತನ, ಅಡಿಕೆ ಕಳ್ಳತನ ಸೇರಿದಂತೆ ಇನ್ನಿತರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕುರಿತು ಕಡಬ ಠಾಣೆಯಲ್ಲಿ ನಾಸಿರ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು.