ಮಂಗಳೂರು,ಆ 20 (Daijiworld News/RD): ಎರಡು ವರ್ಷಗಳ ಹಿಂದೆ ನಡೆದಿದ್ದ ಕಾರ್ತಿಕ ರಾಜ ಎಂಬವರ ಕೊಲೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ, ಇಲ್ಲದಿದ್ದರೆ ದಕ್ಷಿಣ ಕನ್ನಡಕ್ಕೆ ಬೆಂಕಿ ಹಂಚುತ್ತೇವೆ ಎಂಬ ಬೆದರಿಕೆ ಹಾಕಿದ ಆರೋಪ ಪ್ರಕರಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೋಣಾಜೆ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು. ಹೀಗಾಗಿ ಅಧೀನ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿದ್ದು, ಹೀಗಾಗಿ ತನ್ನ ಮೇಲೆ ದಾಖಲಾಗಿರುವ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯದಲ್ಲಿ ಸಲ್ಲಿಕೆ ಯಾಗಿರುವ ಆರೋಪವನ್ನು ರದ್ದುಪಡಿಸುವಂತೆ ಕೋರಿ ನಳಿನ್ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಈ ವೇಳೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಸಂಸದರಿಗೆ ರಿಲೀಫ್ ನೀಡಿದೆ.
ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್ , ರಾಜಕೀಯ ದುರುದ್ದೇಶದಿಂದ ಈ ಪ್ರಕರಣವನ್ನು ದಾಖಲಿಸಿದ್ದು, ಆರೋಪಗಳಿಗೆ ಯಾವುದೇ ಸಾಕ್ಷಿ ಆಧಾರಗಳನ್ನು ಪೊಲೀಸರು ಒದಗಿಸಿಲ್ಲ. ಹೀಗಾಗಿ ಪ್ರಕರಣದ ಎಫ್ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಬೆಕು ಎಂದು ನ್ಯಾಯ ಪೀಠಕ್ಕೆ ಕೋರಿದರು.