ಮಂಗಳೂರು,ಆ 20 (Daijiworld News/RD): ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಸರಣಿ ರಜೆ ನೀಡಿದ್ದು, ಇದರಿಂದ ಪಾಠ್ಯ ಕ್ರಮಗಳು ಬಾಕಿ ಉಳಿದಿವೆ. ಹಾಗಾಗಿ ಇದನ್ನು ಸರಿದೂಗಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಹಾಗೂ ಭಾನುವಾರ ಎಂದಿನಂತೆ ತರಗತಿಗಳು ನಡೆಯಲಿದೆ ಎಂದು ಸೂಚಿಸಿದ್ದು, ಈ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಶನಿವಾರ ಅಪರಾಹ್ನ ತರಗತಿ ನಡೆಸುವುದಕ್ಕೆ ಯಾವುದೇ ತೊಂದರೆಯಿಲ್ಲ, ಆದರೆ ಭಾನುವಾರ ಕೂಡ ತರಗತಿ ಮಾಡಲು ಸಾಧ್ಯವಿಲ್ಲ ಎಂದು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ ಸೋಜಾ ತಿಳಿಸಿದ್ದಾರೆ. ವಾರದ ಆರು ದಿನಗಳಲ್ಲಿ ಪಾಠ ಕೇಳುವ ಮಕ್ಕಳು, ವಾರದಲ್ಲಿ ಒಂದು ದಿನವಾದರೂ ವಿಶ್ರಾಂತಿ ಸಿಗಲಿ ಎಂದು ಬಯಸುತ್ತಾರೆ. ಅದನ್ನು ಬಿಟ್ಟು ಮಕ್ಕಳು ಏಳು ದಿನವು ಪಾಠ ಕೇಳಿದರೆ, ಅವರಿಗೆ ಮಾನಸಿಕೆ ಹಿಂಸೆ ನೀಡಿದಂತೆ ಆಗುತ್ತದೆ. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಬಹುವುದು. ಕಳೆದ ವರ್ಷವು ಪಾಠ ಬಾಕಿ ಉಳಿದಾಗ ಶನಿವಾರ ತರಗತಿ ನಡೆಸಿ ಸರಿದೂಗಿಸಲಾಗಿತ್ತು ಎಂದು ಹೇಳಿದರು.
ಭಾನುವಾರವು ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ಹಲವು ರೀತಿಯ ಸಮಾರಂಭಗಳು, ಕಾರ್ಯಕ್ರಮಗಳು ಇರುತ್ತವೆ. ಹಾಗಾಗಿ ಅಂದು ತರಗತಿ ನಡೆಸಿದರೆ ಮಕ್ಕಳಿಗೆ ಮತ್ರವಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳಿಗೂ ತೊಂದರೆಯಾಗುತ್ತದೆ ಎಂದರು. ಇದರಿಂದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ಸೂಚನೆಗೆ ನಮ್ಮ ವಿರೋಧವಿದೆ ಎಂದು ದ.ಕ. ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಜಯಶ್ರೀ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್, ಭಾನುವಾರ ತರಗತಿ ನಡೆಸುವುದಕ್ಕೆ ಶಿಕ್ಷಕರು, ಮಕ್ಕಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪಠ್ಯ ವಿಷಯ ಮುಗಿಸುವುದು ಕೂಡ ಶಿಕ್ಷಣ ಇಲಾಖೆಯ ಕರ್ತವ್ಯವಾಗಿದ್ದು, ಹಾಗಾಗಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಒಂದು ನಿರ್ಧಾರ ಕೈಗೊಂಡು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದರು.