ಮಂಗಳೂರು, ಏ. 15 (DaijiworldNews/AA): ಜಾಗತಿಕ ತಾಪಮಾನ ಏರಿಕೆ, ಇಂಧನ ಕೊರತೆ ಮತ್ತು ಮೀನಿನ ಸಂತತಿಯಲ್ಲಿನ ಇಳಿಕೆಯಿಂದಾಗಿ ಮಂಗಳೂರಿನಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ಸದ್ಯ ಮೀನುಗಾರಿಕೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪ್ರಸ್ತುತ ಕೇವಲ ಶೇ. 15 ರಷ್ಟು ಬೋಟ್ಗಳು ಮಾತ್ರ ಸಮುದ್ರಕ್ಕೆ ಇಳಿಯುತ್ತಿವೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಟ್ರಾಲ್ ಬೋಟ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಬೆಂಗ್ರೆ, ಸಮುದ್ರದ ಉಷ್ಣಾಂಶ ಹೆಚ್ಚಾದ ಕಾರಣ ಮೀನುಗಳು ಸಮುದ್ರದ ಆಳಕ್ಕೆ ಹೋಗುತ್ತಿವೆ. ಇದರಿಂದಾಗಿ ಬಲೆಗಳಿಗೆ ಸಾಕಷ್ಟು ಪ್ರಮಾಣದ ಮೀನುಗಳು ಬೀಳುತ್ತಿಲ್ಲ ಎಂದು ವಿವರಿಸಿದರು.
"ಮೀನುಗಾರಿಕೆಯ ವೆಚ್ಚ ಬಹಳ ಹೆಚ್ಚಾಗಿದೆ. ಒಂದು ಬೋಟ್ ಮೀನುಗಾರಿಕೆಗೆ ಹೋಗಿ ಲಾಭ ಅಥವಾ ಅಸಲು ಪಡೆಯಬೇಕೆಂದರೆ ಕನಿಷ್ಠ 12 ಲಕ್ಷ ರೂಪಾಯಿ ಮೌಲ್ಯದ ಮೀನು ಸಿಗಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಷ್ಟು ಮೀನುಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು ಶೇ. 85 ರಷ್ಟು ಬೋಟ್ಗಳು ಬಂದರಿನಲ್ಲೇ ಲಂಗರು ಹಾಕಿವೆ" ಎಂದು ತಿಳಿಸಿದರು.
ಯುದ್ಧದ ಹಿನ್ನೆಲೆಯಲ್ಲಿ ಮೀನುಗಾರಿಕೆ ಪೆಟ್ರೋಲ್ ಬಂಕ್ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ, ಇತ್ತೀಚೆಗೆ ಸ್ಪೀಕರ್ ಯು.ಟಿ. ಖಾದರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೀನುಗಾರಿಕಾ ವಲಯಕ್ಕೆ ಸಮರ್ಪಕ ಇಂಧನ ಪೂರೈಕೆಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಮೂರು ತಿಂಗಳ ಮೀನುಗಾರಿಕಾ ನಿಷೇಧಕ್ಕೆ ಬೇಡಿಕೆ
ಮೀನುಗಳ ಸಂತಾನೋತ್ಪತ್ತಿಗೆ ಪೂರಕವಾಗಿ ವಾರ್ಷಿಕ ಮೀನುಗಾರಿಕಾ ರಜೆಯನ್ನು ಮೂರು ತಿಂಗಳಿಗೆ ವಿಸ್ತರಿಸುವಂತೆ ಸಂಘವು ಸರ್ಕಾರಕ್ಕೆ ಮನವಿ ಮಾಡಿದೆ. ಸುಮಾರು 15 ವರ್ಷಗಳ ಹಿಂದೆ ಮೂರು ತಿಂಗಳ ನಿಷೇಧ ಜಾರಿಯಲ್ಲಿತ್ತು. ಈಗ ಜೂನ್ ಮತ್ತು ಜುಲೈನಲ್ಲಿ ಮಾತ್ರ ನಿಷೇಧವಿದ್ದು, ಆಗಸ್ಟ್ನಲ್ಲಿ ಮೀನುಗಾರಿಕೆ ಪುನರಾರಂಭವಾಗುತ್ತದೆ. ಮೀನುಗಳ ಸಂತಾನೋತ್ಪತ್ತಿಯ ಪ್ರಮುಖ ಅವಧಿಯಲ್ಲಿ ಮೂರು ತಿಂಗಳ ಕಾಲ ವಿರಾಮ ನೀಡಿದರೆ, ಮುಂದಿನ ಸೀಸನ್ನಲ್ಲಿ ಮೀನಿನ ಇಳುವರಿ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಚೇತನ್ ಬೆಂಗ್ರೆ ಅಭಿಪ್ರಾಯಪಟ್ಟಿದ್ದಾರೆ.