ಮಂಗಳೂರು ಡಿ 22 : ನಗರದಲ್ಲಿ `ಕರಾವಳಿ ಉತ್ಸವ’ ಉದ್ಘಾಟನೆಗೆ ಚಿತ್ರನಟ ಪ್ರಕಾಶ್ ರೈಯನ್ನು ಆಹ್ವಾನಿಸಿದ್ದಕ್ಕೆ ಕೆಲ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಅವರ ಭೇಟಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ್ ಯು.ಟಿ ಖಾದರ್ ತಿಳಿಸಿದ್ದಾರೆ. ಪ್ರಕಾಶ್ ರೈ ಈ ನಾಡಿನ ಮಣ್ಣಿನ ಮಗ. ಅವರು ಬರಬಾರದು ಅನ್ನಲು ಇವರ್ಯಾರು? ಪ್ರಕಾಶ್ ರೈ ಬಂದೇ ಬರ್ತಾರೆ, ತಾಕತ್ತಿದ್ದರೆ ನಿಲ್ಲಿಸಲಿ. ಪ್ರಕಾಶ್ ರೈ ಇವರು ಹೇಳಿದಂತೆ ಕೇಳಿದ್ರೆ ಒಳ್ಳೆಯವರು ಇಲ್ಲದಿದ್ದರೆ ಕೆಟ್ಟವರು ಅಲ್ಲವೇ , ಇದೇನು ಹಿಟ್ಲರ್ ಆಡಳಿತವಾ? ಅಂತಾ ಸವಾಲು ಹಾಕಿದ್ದಾರೆ. ಇಂದಿನಿಂದ ಚಾಲನೆ ಸಿಗಲಿರುವ `ಕರಾವಳಿ ಉತ್ಸವ 2017′ ಡಿ 31 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಬಹುಭಾಷಾ ನಟ ಪ್ರಕಾಶ್ ರೈ ಶುಕ್ರವಾರ ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ.
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗೋ ಬ್ಯಾಕ್ ಪ್ರಕಾಶ್ ರೈ ಅಂತಾ ಫೇಸ್ ಬುಕ್ ನಲ್ಲಿ ಹ್ಯಾಶ್ ಟ್ಯಾಗ್ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಉಸಿರಾಡಲು ಉತ್ತಮ ಗಾಳಿ ಇರುವಾಗ ಕನ್ನಡ ನಾಡಿಗೆ ಯಾಕೆ ಬರ್ತೀಯಾ ಅಂತ ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ಪ್ರಕಾಶ್ ರೈ, ಕೇರಳ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂದಿದ್ದರು. ಈ ಮಾತಿಗೆ ಹಲವೆಡೆ ವಿರೋಧ ಕೂಡ ಕೇಳಿಬಂದಿತ್ತು. ಇದೀಗ ಮಂಗಳೂರಿನಲ್ಲಿ ಇಂದು ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ ಆಗಮಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.