ಕಾಸರಗೋಡು, ಆ 20 (DaijiworldNews/SM): ಮಂಜೇಶ್ವರ ‘ಅವರ್ ಲೇಡಿ ಆಫ್ ಮೆರ್ಸಿ’ ಚರ್ಚ್ ಮೇಲಿನ ದಾಳಿ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಭರವಸೆ ನೀಡಿದ್ದಾರೆ.
ಮಂಜೇಶ್ವರ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಸಲ್ಡಾನ್ಹಾರವರ ನೇತೃತ್ವದ ನಿಯೋಗ ಮಂಗಳವಾರದಂದು ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭ ದೂರು ಸ್ವೀಕರಿಸಿದ ಪೊಲೀಸ್ ಮಹಾ ನಿರ್ದೇಶಕರು ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಚರ್ಚ್ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಪೊಲೀಸರಿಗೆ ಆರೋಪಿಗಳ ಸುಳಿವು ಇನ್ನೂ ಲಭಿಸಿಲ್ಲ. ಸಿಸಿ ಕ್ಯಾಮರಾದ ದೃಶ್ಯ ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಡ ತೀವ್ರಗೊಳ್ಳುತ್ತಿದೆ.
ಈ ನಡುವೆ ಚರ್ಚ್ ನ ಧರ್ಮಗುರು ಫಾದರ್ ವಿನ್ಸೆಂಟ್ ಸಲ್ಡಾನ್ಹಾ ನೇತೃತ್ವದ ನಿಯೋಗ ಇಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹ್ರಾ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪೊಲೀಸ್ ಅದಾಲತ್ ನಲ್ಲಿ ಮನವಿ ಸಲ್ಲಿಸಲಾಯಿತು.
ಕಾಸರಗೋಡು ಕೋಟೆಕಣಿ ಇಗರ್ಜಿಯ ಧರ್ಮಗುರು ಫಾದರ್ ಮಣಿ ಮೇಲ್ವಟ್ಟಂ ಮೊದಲಾದವರು ಜೊತೆಗಿದ್ದರು. ಸೋಮವಾರ ಮುಂಜಾನೆ ನಡೆದ ಚರ್ಚ್ ಮೇಲೆ ಕಲ್ಲೆಸೆತ ಘಟನೆ ಹಿನ್ನಲೆಯಲ್ಲಿ ಚರ್ಚ್ ಗೆ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆರಳಚ್ಚು ತಜ್ಞರು ಇಂದು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.