ಪುತ್ತೂರು ಡಿ 22: ಫಾಸ್ಟ್ ಪುಡ್ ತೆರೆಯಲು ಅನುಮತಿಗಾಗಿ 2500 ರೂಪಾಯಿ ಬೇಡಿಕೆಯಿಟ್ಟಿದ್ದ ತಾಲೂಕು ಆರೋಗ್ಯ ಇಲಾಖೆಯ ಪ್ರಭಾರ ಹಿರಿಯ ಆಹಾರ ನಿರೀಕ್ಷಕ ಸುಮಂತ್ ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪೆರ್ನೆ ನಿವಾಸಿ ಸಂತೋಷ್ ಆಚಾರ್ಯರವರು ಚಾಟ್ಸ್ ಐಟಂಗಳ ಫಾಸ್ಟ್ ಫುಡ್ ಪ್ರಾರಂಭಿಸಲು ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಿಂದ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು.ಅನುಮತಿ ನೀಡಬೇಕಾದರೆ 1000 ರೂಪಾಯಿ ಸರಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು ನಾನು 100 ರೂಪಾಯಿಯಲ್ಲಿ ಮಾಡಿಕೊಡುತ್ತೇನೆ. 3000 ರೂಪಾಯಿ ತನಗೆ ನೀಡುವಂತೆ ಬೇಡಿಕೆಯಿಟ್ಟಿದ್ದರು. ಅರ್ಜಿದಾರ ಸಂತೋಷ್ರವರು ಇದು ಸಾಧ್ಯವಿಲ್ಲ ಎಂದಾಗ ಕನಿಷ್ಟ 2500 ನೀಡುವಂತೆ ಸುಮಂತ್ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಡಿ.22 ರಂದು ಬೆಳಿಗ್ಗೆ ಸಂತೋಷ್ರವರು ಮಂಗಳೂರಿನ ಎಸಿಬಿ ಕಚೇರಿಗೆ ತೆರಳಿ ದೂರು ನೀಡಿದ್ದರು.
ಎಸಿಬಿ ಎಸ್.ಪಿ ಶ್ರುತಿ ಎನ್.ಎಸ್ರವರ ಮಾರ್ಗದರ್ಶನದಂತೆ ಡಿವೈಎಸ್ಪಿ ಸುಧೀರ್ ಎಂ ಹೆಗ್ಡೆ ಹಾಗೂ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ನೇತೃತ್ವದಲ್ಲಿ ಎಂಟು ಮಂದಿ ಸಿಬ್ಬಂದಿಗಳು ಡಿ 22ರ ಶುಕ್ರವಾರ ಮಧ್ಯಾಹ್ನ ವೇಳೆಗೆ ತಾಲೂಕು ಆರೋಗ್ಯ ಇಲಾಖೆಯ ಕಚೇರಿಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆಯಿಂದ ನೀಡಿದ 2000 ಹಾಗೂ 500 ಮುಖ ಬೆಲೆಯ ನೋಟುಗಳು ಅವರಲ್ಲಿರುವುದು ಪತ್ತೆಯಾಗಿದೆ.