ಪುತ್ತೂರು,ಆ 21(Daijiworld News/RD): ಸೋಮವಾರ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ, ಮರುದಿನ ಮುಂಜಾನೆ ಪ್ರಿಯಕನ ಜೊತೆ ಮದುವೆಯಾಗಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಹಾಜರಾದ ಘಟನೆ ಆ 20 ರ ಮಂಗಳವಾರ ನಡೆದಿದೆ.
ರಕ್ಷಾ ಮತ್ತು ಕೋಡಿಂಬಾಳದ ದೇವಪ್ಪ ನ್ಯಾಕ್ ಅವರ ಪುತ್ರ ರಾಜೇಶ್ ನನ್ನು ಪ್ರೀತಿಸುತ್ತಿದ್ದು, ಮಂಗಳವಾರದಂದು ನಗರದ ಹೊರವಲಯದ ಮಜಲುಮಾರು ಉಮಾ ಮಹೇಶ್ವರಿ ದೇವಾಲಯದಲ್ಲಿ ವಿವಾಹವಾಗಿ ಬಳಿಕ ಮಹಿಳಾ ಠಾಣೆಗೆ ಹಾಜರಾಗಿದ್ದಾರೆ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಸ್ವ ಇಚ್ಛೆಯಿಂದ ಮದುವೆಯಾಗುತ್ತಿರುವುದಾಗಿ ಠಾಣೆಯಲ್ಲಿ ಹೇಳಿದ್ದಾರೆ.
ಪುತ್ತೂರಿನ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ರಕ್ಷಾ ಎಂದು ಗುರುತಿಸಲಾಗಿದೆ. ಮೂಲತಃ ಕಡಬ ತಾಲೂಕಿನ ಮುಳಿಯ ನಿವಾಸಿಯಾಗಿರುವ ರಕ್ಷಾ, ನೆಹರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈಕೆ ಸೋಮವಾರ ರಾತ್ರಿ ಮನೆಗೆ ಬಾರದೇ ಇರುವುದನ್ನು ಗಮನಿಸಿ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.