ಕಾಪು, ಆ 21 (DaijiworldNews/SM): ಮುಖ್ಯಮಂತ್ರಿಗಳು ಆಗಮಿಸಿ ಮಳೆಯಿಂದ ಹಾನಿಗೊಳಗಾದವರಿಗೆ ತುರ್ತು 10 ಸಾವಿರ ರೂಪಾಯಿ ಹಾಗೂ ಶಾಶ್ವತ ಪರಿಹಾರ ಘೋಷಿಸಿ ತೆರಳಿದ್ದರೂ, ಅದು ಸಂತ್ರಸ್ತರಿಗೆ ತಲುಪುವಲ್ಲಿ ವಿಳಂಭವಾಗಿದೆ ಎಂದು ಕೆಪಿಸಿಸಿ ನಿಯೋಗದ ಅಧ್ಯಕ್ಷ ಬಿ. ರಮಾನಾಥ ರೈ ಅರೋಪಿಸಿದರು.
ಮಳೆ ಹಾನಿ ನಷ್ಟದ ಸಮೀಕ್ಷೆಗಾಗಿ ಕಾಪುವಿಗೆ ಬುಧವಾರ ಭೇಟಿ ನೀಡಿ ರಾಜೀವ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಅವಲೋಕಿಸಿದ ಕೇಂದ್ರ ಸರ್ಕಾರ, ಮುಖ್ಯಮಂತ್ರಿ ದೆಹಲಿಗೆ ಎರಡು ಬಾರಿ ತೆರಳಿ ಬರಿಗೈಲಿ ವಾಪಾಸದರೂ ಇನ್ನೂ ಪರಿಹಾರ ಘೋಷಿಸಿಲ್ಲ ಎಂದು ಲೇವಡಿ ಮಾಡಿದರು.
ಮಂತ್ರಿಗಿರಿಯ ವಿಷಯದಲ್ಲಿಯೇ ಕಾಲಹರಣ ಮಾಡುತ್ತಿರುವ ಶಾಸಕರು ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ೨೫ ಬಿಜೆಪಿ ಸಂಸದರಿದ್ದು, ಕೇಂದ್ರಕ್ಕೆ ಒತ್ತಾಯ ತಂದು ಪರಿಹಾರ ತರಿಸುವಲ್ಲಿಯೂ ಎಡವಿದ್ದಾರೆ. ಮಳೆ ಹಾನಿ ಕುರಿತಂತೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದರು.