ಮಂಗಳೂರು, ಆ 21 (DaijiworldNews/SM): ನಗರದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ನಲ್ಲಿ ಸುರಿಯುತ್ತಿರುವ ತ್ಯಾಜ್ಯದ ರಾಶಿ ನಿರಂತರ ಮಳೆಗೆ ಮಂದಾರ ನಗರಕ್ಕೆ ಹರಿದು ಜನತೆಯ ಬದುಕನ್ನೇ ಕಸಿದ ದುರಂತ ಘಟನೆ ನಡೆದ ಬೆನ್ನಲ್ಲೇ ಇದೀಗ ಬುಧವಾರದಂದು ಈ ಪ್ರದೇಶಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ನಿಯೋಗ ಇಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ, ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸಲು ಮತ್ತು ತ್ಯಾಜ್ಯವನ್ನು ಹೊರತೆಗೆದು ಸ್ವಚ್ಛಗೊಳಿಸುವ ಕಾರ್ಯವನ್ನು ಸರಕಾರ ತಕ್ಷಣಕ್ಕೆ ಮಾಡಬೇಕು. ಅಲ್ಲದೆ ಕೂಡಲೇ 100 ಕೋಟಿ ರೂಪಾಯಿಗಳ ಪ್ಯಾಕೇಜನ್ನು ಸರಕಾರ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಹಿಂದಿನ ಸರಕಾರಗಳು ಮಾಡಿದ ಕಾರ್ಯವೆಂದು ಆರೋಪ ಮಾಡುವ ಬದಲು ತಕ್ಷಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುವುದನ್ನು ಪರಿಶೀಲನೆ ನಡೆಸಿ ಅವುಗಳನ್ನು ಜಾರಿಗೆ ತರಬೇಕೆಂದರು. ಇನ್ನು ಈ ಹಿಂದೆ ವಾಮಂಜೂರಿನ ಕೆತ್ತಿನಲ್ನಲ್ಲಿ ಭೂಕುಸಿತ ಉಂಟಾದ ಸಂದರ್ಭದಲ್ಲಿ ನಾವು ವಿರೋಧಪಕ್ಷದಲ್ಲಿದ್ದರೂ ಕೂಡಾ ಅದನ್ನು ಪರಿಣಾಮಕಾರಿಯಾಗಿ ಸರಿಪಡಿಸಿ ಜನತೆಗೆ ನೆಮ್ಮದಿಯನ್ನು ನೀಡಿದ್ದೆವು ಎಂದರು.
ಇನ್ನು ಮಾಜಿ ಸಚಿವ ಖಾದರ್ ಮಾತನಾಡಿ, ಪ್ರಸ್ತುತ ಇಲ್ಲಿ ಬಿಜೆಪಿ ಸರಕಾರವಿದೆ. ಬಿಜೆಪಿ ಶಾಸಕರು ಇದ್ದಾರೆ. ಆದರೆ ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ ಅವರು ಇಲ್ಲಿ ಮಾಡಬೇಕಾದ ಎಲ್ಲಾ ಕೆಲಸ ಮಾಡಿದ್ದರೂ, ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಇಲ್ಲಿನ ಜನರ ಸಮಸ್ಯೆ ಬಗೆಹರಿಸಲು ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಯಾವುದೇ ಸಮರ್ಪಕ ಯೋಜನೆಯನ್ನೇ ಸಿದ್ಧಪಡಿಸದೇ ಹಿಂದಿನ ಸರಕಾರವನ್ನು ದೂರುವ ಕ್ರಮ ಸರಿಯಲ್ಲ ಎಂದರು.
ನಿಯೋಗದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಶಿಧರ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರಿದ್ದರು.