ಉಡುಪಿ, ಆ.22(Daijiworld News/SS): ಆಗಸ್ಟ್ 23ರಂದು ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಸದ್ಯ ಕೃಷ್ಣನೂರು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ಅತ್ಯಂತ ವೈಭವದಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ರಾಜ್ಯದ ವಿವಿಧ ಭಾಗದಿಂದ ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಲಕ್ಷಾಂತರ ಜನ ಉಡುಪಿಗೆ ಆಗಮಿಸುತ್ತಾರೆ. ಈಗಾಗಲೇ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಪ್ರಾರಂಭಗೊಂಡಿದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಕ್ಷಾಂತರ ಉಂಡೆ-ಚಕ್ಕುಲಿ ತಯಾರಿ ಆ.20ರಿಂದಲೇ ಪ್ರಾರಂಭವಾಗಿದೆ. 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಆ.23ರಂದು ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅಘ್ರ್ಯಪ್ರದಾನ, 24ರಂದು ಮಧ್ಯಾಹ್ನ 3ಗಂಟೆಗೆ ರಥಬೀದಿಯಲ್ಲಿ ವಿಟ್ಲಪಿಂಡಿ ನಡೆಯಲಿದ್ದು ಪೂರ್ವ ಸಿದ್ಧತೆ ಭರದಿಂದ ಸಾಗಿದೆ. 35ಕ್ಕೂ ಅಧಿಕ ಹುಲಿ ವೇಷ ತಂಡಗಳು ಶ್ರೀಕೃಷ್ಣ ಲೀಲೋತ್ಸವದಲ್ಲಿ ಪಾಲ್ಗೊಂಡು ಮೆರುಗು ನೀಡಲಿವೆ. ಅಂದು ಮೊಸರು ಕುಡಿಕೆ ಉತ್ಸವವೂ ನಡೆಯಲಿದೆ.
ಶ್ರೀ ಕೃಷ್ಣಮಠದಿಂದ ಭಕ್ತರಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಉಂಡೆ, ಚಕ್ಕುಲಿ ಪ್ರಸಾದವನ್ನು ವಿಶೇಷವಾಗಿ ಕಳುಹಿಸಿಕೊಡಲಾಗುತ್ತದೆ. ಅದಕ್ಕಾಗಿ 1.5 ಲಕ್ಷ ಚಕ್ಕುಲಿ ಹಾಗೂ 1 ಲಕ್ಷ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಮಡಿಯಲ್ಲಿ ತಯಾರಿಸುವ ಲಡ್ಡಿಗೆ ಮುಹೂರ್ತ 23ರಂದು ಬೆಳಗ್ಗೆ 9.30ಕ್ಕೆ ಭೋಜನ ಶಾಲೆಯಲ್ಲಿ ನಡೆಯಲಿದೆ. ಮಧ್ಯರಾತ್ರಿಯ ಚಂದ್ರೋದಯದಲ್ಲಿ ವಿಶೇಷಪೂಜೆ, ಉಂಡೆ, ಚಕ್ಕುಲಿ ಸಹಿತ ಶ್ರೀಕೃಷ್ಣನಿಗೆ ನೈವೇದ್ಯಅರ್ಪಿಸಿದ ನಂತರ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧಿಧೀಶತೀರ್ಥ ಶ್ರೀಪಾದರಿಂದ ಅಘ್ರ್ಯಪ್ರದಾನ ನಡೆಯಲಿದೆ.