ಕೊಲ್ಲೂರು, ಆ 22 (Daijiworld News/MSP): ಕೊಲ್ಲೂರು ತಾಯಿ ಮೂಕಾಂಬಿಕೆ ಕರೆಸಿಕೊಂಡರೆ ಖಂಡಿತಾ ನಾನು ಕೊಲ್ಲೂರಿಗೆ ಆಗಮಿಸುತ್ತೇನೆ. ಭಾರತಕ್ಕೆ ಒಳ್ಳೆಯದಾಗಲಿ ಎಂಬ ಪ್ರಾರ್ಥನೆಯಿಂದ ಲೋಕ ಕಲ್ಯಾಣವಾಗುವುದು. ಮೂಕಾಂಬಿಕೆ ದೇವಿ ಪ್ರಸಾದವನ್ನು ಶ್ರದ್ಧಾ ಭಕ್ತಿಯಿಂದ ಸ್ವೀಕರಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ಕಾರವೂ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಇದಕ್ಕಾಗಿ ತಾಯಿ ಮೂಕಾಂಬಿಕೆಯ ಅಶೀರ್ವಾದವೂ ಬೇಕು. ಮಹತ್ವದ ನಿರ್ಧಾರದ ಹಿನ್ನಲೆಯಲ್ಲಿ ವಿಶೇಷ ಹೋಮ ಮತ್ತು ಪೂಜೆಯನ್ನು ತಾಯಿ ಸನ್ನಿಧಿಯಲ್ಲಿ ಮಾಡಬೇಕು ಎಂದು ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಕಡೆಯವರು ಕೊಲ್ಲೂರು ಆಡಳಿತ ಮಂಡಳಿಗೆ ಕರೆ ಮಾಡಿ ಕೋರಿದ್ದರಂತೆ. ಅವರ ಕೋರಿಕೆಯಂತೆ ಕೊಲ್ಲೂರು ತಾಯಿ ಶ್ರೀ ಮೂಕಾಂಬಿಕೆ ದೇವಿಗೆ ಚಂಡಿಕಾ ಹೋಮ ಸಹಿತ ಮಹಾಪೂಜೆ ನಡೆಸಿ ದೆಹಲಿಗೆ ತೆರಳಿದ ಅರ್ಚಕರಾದ ಸುಬ್ರಮಣ್ಯ ಅಡಿಗ, ಡಾ|ಕೆ.ಎನ್ ನರಸಿಂಹ ಅಡಿಗ , ಪರಮೇಶ್ವರ್ ಅಡಿಗ ಅವರು ಪ್ರಧಾನಿ ನಿವಾಸಕ್ಕೆ ತೆರಳಿ ಪ್ರಸಾದ ವಿತರಿಸಿದರು.
ಮಾತ್ರವಲ್ಲದೆ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿ ಅರ್ಚಕರು ಹೋಮ ಹಾಗೂ ಪೂಜೆಯ ಪ್ರಸಾದ ನೀಡದ್ದಾರೆ. ಆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಮೂಕಾಂಬಿಕಾ ಪ್ರಸಾದವನ್ನು ಸ್ವೀಕರಿಸಿದ್ದಾರೆ.