ಮಂಗಳೂರು, ಡಿ 23: ನಗರದ ಅತ್ಯಂತ ಪುರಾತನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಧ್ವನಿವರ್ಧಕ ಬಳಸುವುದರಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳಿಯರು ದೂರು ನೀಡಿದ್ದಾರೆ.
ಕದ್ರಿ ದೇವಾಲಯದ ಹೊರಗಡೆ ಧ್ವನಿವರ್ಧಕಗಳನ್ನು ಕಟ್ಟಿರುವುದರಿಂದ ಪರಿಸರವಾಸಿಗಳಿಗೆ ತೊಂದರೆಯಾಗುತ್ತಿದೆ. ಧ್ವನಿವರ್ಧಕಗಳ ಬಳಕೆಯಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿನಲ್ಲಿ ದಾಖಲಾಗಿದ್ದು, ಈ ದೂರಿನ ಮನವಿಯನ್ನು ಜಿಲ್ಲಾಧಿಕಾರಿ ಮತ್ತು ಮೇಯರ್ ಅವರಿಗೆ ಕಳುಹಿಸಲಾಗಿದೆ.
ವಿಶೇಷ ದಿನಗಳಾದ ದೀಪಾವಳಿ, ಮೊಸರುಕುಡಿಕೆ, ನವಮಿ, ಭಜನೆ, ಹರಿಕಥೆ, ನೇಮ, ವಾರ್ಷಿಕ ಜಾತ್ರೆಯ ಸಮಯ ದೇವಸ್ಥಾನದಲ್ಲಿ ಕರ್ಕಶ ಸದ್ದಿನ ಧ್ವನಿವರ್ಧಕ ಅಳವಡಿಸುತ್ತಾರೆ. ಇದರಿಂದ ಸ್ಥಳೀಯ ನಿವಾಸಿಗಳು, ಮಕ್ಕಳು, ವೃದ್ಧರು, ಹೆಂಗಸರು ಆರೋಗ್ಯದ ಸಮಸ್ಯೆಗಳಾದ ನಿದ್ರಾಹೀನತೆ, ಮೈಗ್ರೇನ್, ತಲೆಸುತ್ತು, ಹೃದಯದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸ್ಥಳೀಯರು ದೂರಿನಲ್ಲಿ ಆರೋಪಿಸಿದ್ದಾರೆ. ಮಾತ್ರವಲ್ಲ, ಧ್ವನಿವರ್ಧಕ ನಿಷೇಧಿಸಿ ತಕ್ಷಣ ಕದ್ರಿ ದೇವಾಲಯದ ಸುತ್ತಮುತ್ತಲಿನ ಪರಿಸರವಾಸಿಗಳಿಗೆ ಪರಿಹಾರ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.