ಮಂಗಳೂರು, ಆ 22 (DaijiworldNews/SM): ಪಚ್ಚನಾಡಿಯಲ್ಲಿ ತ್ಯಾಜ್ಯ ರಾಶಿ ಕುಸಿತದಿಂದ ಮಂದಾರಬೈಲು ಪ್ರದೇಶ ಸಂಪೂರ್ಣ ಹಾನಿಗೀಡಾಗಿದೆ. ಇಲ್ಲಿನ 27 ಕುಟುಂಬಗಳಿಗೆ ಬೇರೆಡೆ ನಿವೇಶನ ನೀಡಿ, ಮನೆ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಘೋಷಣೆ ಮಾಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು ಈ ಬಗ್ಗೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಕೋರಿದರು. ಪಚ್ಚನಾಡಿಯ ತ್ಯಾಜ್ಯ ನಿರ್ವಹಣೆಗೂ ಶಾಶ್ವತ ಪರಿಹಾರ ಯೋಜನೆಯನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಮಂದಾರದಲ್ಲಿ ಸಂಭವಿಸಿದ ಹಾನಿಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಭಾರಿ ಮಳೆಗೆ ಪಚ್ಚನಾಡಿಯಲ್ಲಿ ತ್ಯಾಜ್ಯದ ರಾಶಿ ಕುಸಿತಗೊಂಡು ಕೆಳಗಿನ ಮಂದಾರಬೈಲ್ನ ಸುಮಾರ 6 ಕಿ.ಮಿ.ಪ್ರದೇಶ ಬಾಧಿತವಾಗಿದೆ. ಇಲ್ಲಿರುವ 27 ಕುಟುಂಬಗಳನ್ನು ತಾತ್ಕಾಲಿಕ ವಾಗಿ ಕರ್ನಾಟಕ ಗೃಹಮಂಡಳಿಯ ನಿವೇಶನಗಳಿಗೆ ಸ್ಥಳಾಂತರಿಸಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದರು.
ಈ ಪ್ರದೇಶದಲ್ಲಿ ವಾಸವಿರುವ ಕುಟುಂಬಗಳಿಗೆ ಬೇರೆಡೆ ನಿವೇಶನಗಳನ್ನು ಸ್ಥಳಾಂತರ ಮಾಡುವುದು ಶಾಶ್ವತ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ನಿವೇಶನಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಆದರೆ ಮನೆ ನಿರ್ಮಾಣಕ್ಕೆ ಅನುದಾನದ ಅಗತ್ಯವಿದೆ. ಇದನ್ನು ಕೂಡಾ ವಿಪತ್ತು ಎಂದೇ ಪರಿಗಣಿಸಿ ರಾಜ್ಯ ಸರಕಾರ ಮಳೆ ಸಂತಸ್ತರಿಗೆ ಮನೆ ನಿರ್ಮಿಸಲು ನೀಡುತ್ತಿರುವ 5 ಲಕ್ಷ ರೂಪಾಯಿ ವಿಶೇಷ ಪ್ಯಾಕೇಜ್ನ್ನು ಇಲ್ಲಿನ ಸಂತ್ರಸ್ತರಿಗೂ ನೀಡಬೇಕು ಎಂದು ಸಚಿವರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.