ಉಡುಪಿ, ಆ 22 (DaijiworldNews/SM): ಸಾಹಿತಿ, ರಂಗಭೂಮಿ ಕಲಾವಿದ, ಶಿಕ್ಷಣ ತಜ್ಞ ಪಿ. ವಾಸುದೇವ ರಾವ್(77) ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ. ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಪಡುಕುದ್ರು ಶ್ರೀನಿವಾಸ ರಾವ್ ಮತ್ತು ಶ್ರೀಮತಿ ಪದ್ಮಾವತಿ ದಂಪತಿಗಳ ದ್ವಿತೀಯ ಪುತ್ರನಾಗಿ 1942 ರಲ್ಲಿ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಪಡುಕುದ್ರುವಿನಲ್ಲಿ ಜನಿಸಿದ ಪಿ. ವಾಸುದೇವ ರಾವ್, ಸ್ನಾತಕೋತ್ತರ ಪದವೀಧರರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಲ್ಲಿ 48 ವರ್ಷಸೇವೆ ಸಲ್ಲಿಸಿದ್ದು, ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿಯಲ್ಲಿ ಉಪನ್ಯಾಸಕರಾಗಿ ನಿವೃತ್ತರಾದರು. ನಂತರ ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯದ ಹಿರಿಯ ಹವ್ಯಾಸಿ ನಾಟಕ ಸಂಸ್ಥೆ 'ರಂಗಭೂಮಿ ಉಡುಪಿ ಇದರ ಸದಸ್ಯರಾಗಿ, ಜೊತೆ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಇದೀಗ ಉಪಾಧ್ಯಕ್ಷರಾಗಿದ್ದು, ಸಂಸ್ಥೆಯ ಕಟ್ಟಡಕ್ಕೆ ಜಾಗವನ್ನು ಉಚಿತವಾಗಿ ನೀಡಿದ್ದರು. ಹಾಗೂ ಹಲವು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕತೆ ಹಾಗೂ ಜೀವನಮೌಲ್ಯಗಳ ಕುರಿತು ಉಪನ್ಯಾಸ ನೀಡಿದ್ದಾರೆ.
ಇವರು ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಇವರ ನಿರ್ದೇಶನದ ಹಲವು ಯುವವಾಣಿ ಕಾರ್ಯಕ್ರಮಗಳು ಪ್ರಸಾರಗೊಂಡಿದೆ.
2007ರಲ್ಲಿ 'ಇಂಟರ್ ನ್ಯಾಶನಲ್ ಇಂಟೆಗ್ರಿಟಿ, ಪೀಸ್ ಎಂಡ್ ಫ್ರೆಂಡ್ ಶಿಪ್ ಸೊಸೈಟಿ'ಯಿಂದ ರಾಜೀವ ಗಾಂಧಿ ಎಕ್ಸಲೆನ್ಸಿ ಗೋಲ್ಡ್ ಅವಾರ್ಡ್ ಪಡೆದಿದ್ದಾರೆ. 2016 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಗಳಿಸಿದ್ದಾರೆ.
'ಬಾಳ ಬೆಳಕು', `ಭಗವದ್ಗೀತೆ', `ಪರಂಪರಾಗತ', `ಬರಹ ತರಹ' - ಇವರ ಪ್ರಕಟಿತ ಕೃತಿಗಳು.