ಹೊನ್ನಾವರ, ಡಿ 23: ವಿವಾದಾತ್ಮಕ ಟ್ವೀಟ್ ಮಾಡಿದ್ದ ಆರೋಪದ ಮೇಲೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಹೊನ್ನಾವರದ 9ನೇ ತರಗತಿ ಬಾಲಕಿಯೊಬ್ಬಳ ಮೇಲೆ ಜಿಹಾದಿಗಳು ಅತ್ಯಾಚಾರಕ್ಕೆ ಪ್ರಯತ್ನಿಸಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು.
ಮಾಗೋಡಿನ ಕಾವ್ಯಾ ನಾಯ್ಕ ವೈಯಕ್ತಿಕ ಕಾರಣದಿಂದಾಗಿ ತನ್ನ ಕೈಗೆ ಲಿಂಬೆ ಗಿಡದ ಮುಳ್ಳಿನಿಂದ ಗೀರಿ ಡಿ.14ರಂದು ಗಾಯಮಾಡಿಕೊಂಡಿದ್ದಳು. ಈ ವಿಚಾರವಾಗಿ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಬಾಲಕಿ ನೀಡಿದ ದೂರಿನಲ್ಲಿ ಯಾವುದೇ ಧರ್ಮದ ವಿರುದ್ಧ ಆರೋಪ ಮಾಡಿಲ್ಲ. ಕರಂದ್ಲಾಜೆಯವರು ಶಾಂತಿ ಕದಡುವ ಉದ್ದೇಶದಿಂದ ಇಂಥ ಟ್ವೀಟ್ ಮಾಡಿದ್ದಾರೆ. ಇದರಿಂದ ಪಟ್ಟಣದಲ್ಲಿ ಕೋಮು ಸೌಹಾರ್ದ ಹದಗೆಟ್ಟಿದೆ ಎಂದು ಉಲ್ಲೇಖಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.