ಮಂಗಳೂರು, ಆ 23 (Daijiworld News/MSP): ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಧರೆ ಕುಸಿತ ಪ್ರಕರಣಗಳು ಮುಂದುವರಿದಿದ್ದು, ಇದೀಗ ಕುಲಶೇಖರ ಬಳಿಯೂ ಹಳಿಗೆ ಮಣ್ಣು ಕುಸಿದ ಬಿದ್ದ ಪರಿಣಾಮ ಈ ಮಾರ್ಗವಾಗಿ ಶುಕ್ರವಾರ ಈ ಮಾರ್ಗವಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ.
ಕುಲಶೇಖರದಲ್ಲಿ ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕುಲಶೇಖರ-ಪಡೀಲ್ ರೈಲ್ವೆ ಸುರಂಗ ಮಾರ್ಗದ ಸನಿಹ ಈ ಘಟನೆ ನಡೆದಿದ್ದು ಈ ಹಿನ್ನಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
ಹಳಿಯಲ್ಲಿದ್ದ ಮಣ್ಣು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ ಇಲಾಖೆ ಮಾಡುತ್ತಿದ್ದು ಈ ನಡುವೆ ಗೋವಾ-ಮಂಗಳೂರು ಇಂಟರ್ಸಿಟಿ ರೈಲು ಮತ್ತು ಮಂಗಳೂರು-ಗೋವಾ ಪ್ಯಾಸೆಂಜರ್ ರೈಲು ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೇ ನಿಲ್ದಾಣದಿಂದ ವಾಪಾಸ್ ಆಗಿದೆ ಎಂದು ತಿಳಿದುಬಂದಿದೆ. ಮಾತ್ರವಲ್ಲದೆ ನೇತ್ರಾವತಿ ಎಕ್ಸ್ ಪ್ರೆಸ್ ರೈಲನ್ನು ಜೋಕಟ್ಟೆ ಬಳಿ ಸ್ಥಗಿತಗೊಳಿಸಲಾಗಿದೆ. ಮಡ್ಗಾಂವ್- ಮಂಗಳೂರು ಡೆಮೊ ರೈಲು ತೋಕೂರುನಿಂದ ವಾಪಾಸ್ ಆಗಲಿದೆ ಎಂದು ತಿಳಿದುಬಂದಿದೆ.