ಮಂಗಳೂರು, ಆ 23 (Daijiworld News/MSP): ನಾಳೆಯಿಂದ ಅಂದರೆ ಆ. 24ರ ಶನಿವಾರ ಸೇರಿ ಮುಂದಿನ ಪ್ರತೀ ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗಳನ್ನು ನಡೆಸುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಾಲೆಗಳಿಗೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ಸುರಿದ ವಿಪರೀತ ಮಳೆಯ ಕಾರಣಕ್ಕೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದರಿಂದ ಉಂಟಾಗಿರುವ ತರಗತಿ ಕೊರತೆಯನ್ನು ಸರಿತೂಗಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಇಡೀ ದಿನ ತರಗತಿ ನಡೆಸಲು ಸೂಚಿಸಿದೆ.
ಈ ಹಿನ್ನಲೆಯಲ್ಲಿ ವಿಶೇಷ ತರಗತಿಗಳು ಆಗಸ್ಟ್ 24ರಿಂದಲೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಕೆಲವು ತಾಲೂಕಿನಲ್ಲಿ ಆರು ದಿನ ಹಾಗೂ ಕೆಲವು ತಾಲೂಕಿನಲ್ಲಿ 5 ದಿನ ರಜೆ ನೀಡಲಾಗಿತ್ತು. ಒಂದು ದಿನದ ತರಗತಿ ಸರಿದೂಗಿಸಲು ಎರಡು ಶನಿವಾರ ತರಗತಿ ನಡೆಸಬೇಕಾಗುತ್ತದೆ ಹೀಗಾಗಿ ಮುಂದಿನ 10-12 ಶನಿವಾರ ತರಗತಿ ನಡೆಯಲಿದೆ. ಒಂದು ವೇಳೆ ಶನಿವಾರ ಸರ್ಕಾರಿ ರಜೆ ದಿನವಾದರೆ ತರಗತಿ ನಡೆಸಬೇಕಿಲ್ಲ. ಮತ್ತು ಭಾನುವಾರ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ದಕ್ಷಿಣ ಕನ್ನಡ ಡಿ.ಡಿ.ಪಿ.ಐ. ವೈ. ಶಿವರಾಮಯ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.