ಮಂಗಳೂರು,ಆ 24 (Daijiworld News/RD) : ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಬಲಿಯಾಗಿದ್ದಾಳೆ. ಮೃತ ವಿದ್ಯಾರ್ಥಿನಿ 19 ವರ್ಷದ ಬಂಟ್ವಾಳದ ಸಾಲೆತ್ತೂರು ನಿವಾಸಿ ಮಧುಶ್ರೀಯಾಗಿದ್ದು, ಮಂಗಳೂರು ನಗರದ ಖಾಸಗಿ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ.
ಮಧುಶ್ರೀ ಡೆಂಗ್ಯೂ ಜ್ವರದಿಂದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೂರು ದಿನಗಳ ಹಿಂದೆಯಷ್ಟೇ ಮನೆಗೆ ತೆರಳಿದ್ದರು. ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಆಕೆಗೆ ಗುರುವಾರ ತಡರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಯುವತಿಯ ಸಾವಿಗೆ ಡೆಂಗ್ಯೂ ಕಾರಣವಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಬಿಡುಗಡೆಯಾಗಿದ್ದಳು. ಅವಳ ರಕ್ತದ ಪ್ಲೇಟ್ ಲೆಟ್ ಕೂಡ ನಿಯಂತ್ರಣಕ್ಕೆ ಬಂದಿತ್ತು. ಆದರೆ ಆಕೆಗೆ ಬಳಿಕ ಎದೆನೋವು ಹಾಗೂ ಶ್ವಾಸಕೋಶದ ಸೋಂಕಿನಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ತಿಳಿಸಿದ್ದಾರೆ.