ಉಡುಪಿ,ಆ 24 (Daijiworld News/RD): ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಸಡಗರ ಉಡುಪಿಯಲ್ಲಿ ಮುಂದುವರಿದಿದ್ದು, ಅಷ್ಟಮಿಯ ಪ್ರಯುಕ್ತ ಭಗವಾನ್ ಶ್ರೀ ಕೃಷ್ಣನಿಗೆ ರಾತ್ರಿ ಧಾರ್ಮಿಕ ವಿಧಿ ಅರ್ಘ್ಯ ಪ್ರದಾನ ಮಾಡಲಾಯಿತು. ಶ್ರೀ ಕೃಷ್ಣ ಮಠವನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗಿದ್ದು, ಮಠದ ಗರ್ಭಗುಡಿಯಂತೂ ನಂದನವನವಾಗಿದೆ.
ಶ್ರೀ ಕೃಷ್ಣನ ಜನ್ಮಾಷ್ಟಮಿಗೆ ನಿನ್ನೆ ದಿನವಿಡೀ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ರಾತ್ರಿ 12:12ಕ್ಕೆ ಅರ್ಘ್ಯ ಸಲ್ಲಿಸಿದರು. ಕೃಷ್ಣ ಗುಡಿಯ ಪಕ್ಕದಲ್ಲಿದ್ದ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಅರ್ಪಿಸುವ ಮೂಲಕ ಚಂದ್ರನಿಗೆ ಅರ್ಘ್ಯ ಸಲ್ಲಿಸಿದ ಶ್ರೀಗಳು ಬಳಿಕ ಕೃಷ್ಣನ ಮೂರ್ತಿಗೆ ಕ್ಷೀರಾ, ನೀರಿನ ಮೂಲಕ ಅರ್ಘ್ಯ ಸಮರ್ಪಿಸಿ ಉಂಡೆ ಚಕ್ಕುಲಿ ನೈವೇದ್ಯ ಅರ್ಪಿಸಿ, ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಿದರು.ನಂತರ ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಅರ್ಘ್ಯ ಸಮರ್ಪಿಸಿದರು. ಶ್ರೀಗಳು ಅರ್ಘ್ಯ ಅರ್ಪಿಸಿದ ಬಳಿಕ ದಿನವಿಡೀ ಉಪವಾಸದಲ್ಲಿದ್ದ ಭಕ್ತಾದಿಗಳು ಕೃಷ್ಣನ ಗುಡಿಯ ಎದುರು ಸಾಮೂಹಿಕವಾಗಿ ನೀರಿನಿಂದ ಅರ್ಘ್ಯ ಸಮರ್ಪಿಸಿ ಪುನೀತರಾದರು.
ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಪ್ರಯುಕ್ತ ದೇವರ ವಿಶೇಷ ಪೂಜೆಗಾಗಿ ಲಡ್ಡಿಗೆಯನ್ನು ತಯಾರಿಸಲು ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಇಂದು ವಿಟ್ಲಪಿಂಡಿ ಉತ್ಸವಕ್ಕೆ ಕೃಷ್ಣಮಠ ಅದ್ದೂರಿಯಾಗಿ ಸಜ್ಜುಗೊಂಡಿದ್ದು, ಶ್ರೀಕೃಷ್ಣನ ವಿವಿಧ ಲೀಲೆಗಳು ರಥಬೀದಿಯಲ್ಲಿ ಅನಾವರಣಗೊಳ್ಳಲಿವೆ. ಮಾನವ ಪಿರಮಿಡ್ ನಿರ್ಮಿಸಿ 50 ಅಡಿ ಎತ್ತರದಲ್ಲಿರುವ ಮೊಸರು ಕುಡಿಕೆ ಒಡೆವ ಸಂಭ್ರಮದ ಕ್ಷಣಕ್ಕೆ ಜನರು ಕಾತುರದಿಂದ ಕಾದುಕುಳಿತ್ತಿದ್ದು, 10 ಕಡೆಗಳಲ್ಲಿ ಆಲಾರೆ ಗೋವಿಂದ ತಂಡವು ಮೊಸರು ಕುಡಿಕೆ ಒಡೆದು ಶ್ರೀಕೃಷ್ಣ ಲೀಲೋತ್ಸವನ್ನು ಆಚರಿಸಲಿದ್ದಾರೆ.