ಮಂಗಳೂರು,ಆ 24 (Daijiworld News/RD): ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ, ವಿಶ್ವ ಅರೋಗ್ಯ ಸಂಸ್ಥೆಯ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ಬರ್ಕೆ ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಪಂಜಾಬ್ ಹಾಗೂ ಕಾಶ್ಮೀರ ಮೂಲದ ಬಲ್ಜೀಂದರ್ ಸಿಂಗ್ (48), ಬಸೀತ್ ಷಾ ಎಂದು ಮಂಗಳೂರು ಕಮಿಷನರ್ ಡಾ. ಪಿ.ಎಸ್ ಹರ್ಷ ಹೇಳಿದ್ದಾರೆ.
ಆರೋಪಿ ಡಾ ಬಸೀತ್ ಷಾ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಹೆಸರು ನೊಂದಾಯಿಸಿ ಮದುವೆಯಾಗುವುದಾಗಿ ನಂಬಿಸಿ ಗೋವಾ, ಬೆಳಗಾಂ, ಮುಂಬಯಿ, ಜಾರ್ಖಂಡ್, ಜೈಪುರ, ಕೊಲ್ಕಾತ್ತಾ, ಛತ್ತೀಸ್ ಗಡ್, ಅಮೃತ್ ಸರ್, ಹೈದರಬಾದ್ ಮುಂತಾದ ಕಡೆಗಳಲ್ಲಿ ವಂಚಿಸಿದ್ದಾನೆ ಎಂಬ ವಿಚಾರ ವಿಚಾರಣೆಯ ವೇಳೆ ತಿಳಿದು ಬಂದಿದೆ. ಈ ರೀತಿಯಾಗಿ ಮ್ಯಾಟ್ರಿಮೋನಿಯಲ್ ಮೂಲಕ ಮಂಗಳೂರಿನಲ್ಲಿ ಹೆಸರು ನೊಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದ ಸಂದರ್ಭದಲ್ಲಿ ಆತ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಡಾ ಬಸೀತ್ ಷಾ ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ತಾನೊಬ್ಬ ಡಾಕ್ಟರ್ ಎಂಬುದಾಗಿ ಬಿಂಬಿಸಿಕೊಂಡು ವಂಚನೆ ಮಾಡುತ್ತಿರುವುದು ಬಲ್ಜೀಂದರ್ ಸಿಂಗ್ ಆತನಿಗೆ ಸಹಕರಿಸುತ್ತಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಡಾ ಬಸೀತ್ ಷಾ ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿರುವುದಾಗಿ ತಿಳಿದು ಬಂದಿದ್ದು, ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ತಾನೊಬ್ಬ ಡಾಕ್ಟರ್ ಹಾಗೂ ವಿಶ್ವ ಅರೋಗ್ಯ ಸಂಸ್ಥೆಯ ಡೈರೆಕ್ಟರ್ ಎಂಬುದಾಗಿ ದಾಖಲಾತಿಗಳನ್ನು ತನ್ನಲಿರಿಸಿಕೊಂಡಿದ್ದ. ಕಾರು ಚಾಲಕ ಬಲ್ಜೀಂದರ್ ಸಿಂಗ್ ನನ್ನು ವಿಚಾರಿಸಿದಾಗ, ಆತನು ತಾನು ಡಾ ಬಸೀತ್ ಷಾ ನ ಜೊತೆಯಲ್ಲಿ ಸುಮಾರು 2 ವರ್ಷಗಳಿಂದ ಒಟ್ಟಿಗೆ ಇದ್ದು, ಆತನ ಆದೇಶವನ್ನು ಪಾಲಿಸುತ್ತಿದ್ದ ಎಂಬುದಾಗಿ ತಿಳಿಸಿರುತ್ತಾನೆ. ಆತನ ವಿರುದ್ದ ಈಗಾಗಲೇ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದಿಂದ ತಲೆ ಮರೆಸಿಕೊಂಡು ಬಂದು ದೇಶಾದ್ಯಂತ ಸುತ್ತಾಡಿಕೊಂಡು ವಂಚನೆ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿತರ ಕಾರಿನಲ್ಲಿ ವಲ್ಡ್ ಹೆಲ್ತ್ ಆರ್ಗನೈಝೇಷನ್ ಎಂಬ ನಾಮಫಲಕ ಒಳಗೊಂಡಿದ್ದು, ಐಡಿ ಕಾರ್ಡ್ ಮತ್ತು ಇನ್ನಿತರ ದಾಖಲೆ ಪತ್ರಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದು, ನಕಲಿ ದಾಖಲಾತಿಗಳ ಮೂಲಕ ವಂಚಿಸುತ್ತಿರುವುದಾಗಿ ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.