ಕಾಸರಗೋಡು,ಆ 25 (Daijiworld News/RD): ಸುಮಾರು 600 ವರ್ಷಗಳ ಇತಿಹಾಸವುಳ್ಳ ಹಾಗು ಕನ್ನಡಿಗರ ಶೌರ್ಯ, ಸಾಹಸದ ಪ್ರತೀಕವಾಗಿರುವ, ಇಕ್ಕೇರಿ ರಾಜರು ನಿರ್ಮಿಸಿ ರುವ ಕಾಸರಗೋಡು ಕೋಟೆಯ ಬುರುಜು ಗಾಳಿ ಮಳೆಗೆ ಕುಸಿದು ಬಿದ್ದಿದೆ. ಕಾಡು ಪೊದೆ ಬೆಳೆದು ಕೋಟೆಯ ಬುರುಜು ಯಾರ ಗೋಚರಕ್ಕೂ ಬರುತ್ತಿರಲಿಲ್ಲ. ಗಾಳಿ ಮಳೆಯಿಂದಾಗಿ ಕೋಟೆ ಬುರು ಜಿನ ಕಲ್ಲು ಕುಸಿಯುತ್ತಿದ್ದಂತೆ ಕೋಟೆಗೆ ಹಾನಿಯಾಗಿರುವುದು ಕಂಡು ಬಂದಿದೆ.
ಇಕ್ಕೇರಿ ರಾಜರು ಕಾಸರಗೋಡು ಕೋಟೆಯನ್ನು ನಿರ್ಮಿಸಿದ್ದರು. ಕೋಟೆಯ ದುರಸ್ತಿ ಹಾಗು ನವೀಕರಿಸದಿರುವುದರಿಂದಾಗಿ ಕೋಟೆಯ ಒಂದು ಭಾಗ ಕುಸಿದು ಬೀಳಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕೋಟೆಯನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.
ಕಾಸರಗೋಡು ನಗರದಿಂದ ಫೋರ್ಟ್ ರೋಡ್ ಮೂಲಕ ಕಾಸರಗೋಡು ಕೋಟೆಗೆ ರಸ್ತೆಯಿದ್ದರೂ ಕಾಸರಗೋಡು ಕೋಟೆ ಎಲ್ಲಿದೆ ಎಂಬುದು ಹಲವರಿಗೆ ತಿಳಿದಿಲ್ಲ ಎಂಬ ಪರಿಸ್ಥಿತಿಯೂ ಇದೆ. ಕಾಡು ಪೊದೆ ಬೆಳೆದು ಕೋಟೆ ಗೋಚರಿಸುತ್ತಿಲ್ಲ. ಕೋಟೆಯೊಳಗೆ ಬುರುಜುಗಳು, ಕೆರೆಗಳು, ವೀಕ್ಷಣ ಬತ್ತೇರಿಗಳಿವೆ. ಕಾಸರಗೋಡು ಕೋಟೆಯನ್ನು ಪ್ರಾಚ್ಯ ವಸ್ತು ಇಲಾಖೆ ವಶಪಡಿಸಿಕೊಂಡಿದ್ದರೂ ಕೋಟೆಗೆ ಸೇರಿದ 4.80 ಎಕರೆ ಸ್ಧಳವನ್ನು ಕೆಲವು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಳ್ಳಲು ಯತ್ನಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಕೆಲವು ದಿನಗಳ ಕಾಲ ಇದರ ವಿರುದ್ಧ ಪ್ರತಿಭಟನೆಯೂ ನಡೆದಿತ್ತು. ಎರಡು ವಾರಗಳ ಹಿಂದೆ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯ ಬುರುಜು ಕುಸಿದು ಬಿದ್ದಿತ್ತು.