ಮಂಗಳೂರು,ಆ 25 (Daijiworld News/RD): ವಾಹನಗಳ ಮೇಲೆ ನಕಲಿ ದಾಖಲೆಗಳನ್ನು ಸೃಷ್ಠಿಸಿ, ಬ್ಯಾಂಕುಗಳಿಗೆ ಮೋಸಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆದಳ ಮತ್ತು ಎಕೊನಾಮಿಕ್ ಆಂಡ್ ನಾರ್ಕೋಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬ್ಯಾಂಕ್ ಮತ್ತು ವಾಹನ ಚಾಲಕರಿಗೆ ಒಟ್ಟು ಸುಮಾರು 45 ಲಕ್ಷ ರೂ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮಂಗಳಾದೇವಿಯ ಗೋವರ್ಧನ್ (34), ಬಜಪೆಯ ಭಟ್ರಕೆರೆ ಮಹಮ್ಮದ್ದ ಅನ್ವರ್ ಯಾನೆ ಭಸ್ಮ ಅನ್ವರ್ (44), ತುಂಬೆಯ ನೌಷದ್ ಯಾನೆ ನೌಷದ್ ಹುಸೆನ್ (36), ಕದ್ರಿ ಶಿವಭಾಗ್ ನಿವಾಸಿ ಉಮರ್ ಫಾರೂಕ್ ಯಾನೆ ಆರ್ ಟಿ ಒ ಉಮರ್ (31) ಬಂಧಿತ ಆರೋಪಿಗಳು.
ಈ ನಾಲ್ವರ ತಂಡವು ವಾಹನ ಮಾಲಕರ ಗಮನಕ್ಕೆ ಬಾರದ ರೀತಿಯಲ್ಲಿ ವಂಚನೆ ನಡೆಸುತ್ತಿದ್ದು, ಆರೋಪಿಗಳು ವಿವಿಧ ಬ್ಯಾಂಕುಗಳಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿ ನಕಲಿ ಮಾಲಕರ ಹೆಸರಿನಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುತ್ತಿದ್ದರು. ಬಳಿಕ ಖಾತೆಗಳಿಗೆ ಸಾಲದ ಮೊತ್ತ ವರ್ಗಾಯಿಸಿ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ 21 ರಂದು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಆರ್.ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆದಳಕ್ಕೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಪ್ರಕರಣವನ್ನು ಮುಂದಿನ ತನಿಖೆಗಾಗಿ ಇ ಆಂಡ್ ಎನ್ ಸಿಪಿಎಸ್ ಠಾಣೆಗೆ ನೀಡಲಾಗಿದೆ.