ಉಡುಪಿ,ಆ 25 (Daijiworld News/RD): ಪಾಕ್ ಮೂಲದ ಉಗ್ರನೊಬ್ಬ ಜಿಲ್ಲೆಯ ಮಲ್ಪೆ ಸಮೀಪ ಬಂದಿರುವ ಶಂಕೆ ಇದೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ, ಕರಾವಳಿ ಕಾವಲುಪಡೆಗೆ ತಿಳಿಸಿದೆ.
ಲಷ್ಕರ್ ಇ ತೋಯ್ಬಾ (ಎಲ್ ಟಿ ಟಿ) ಉಗ್ರಗಾಮಿ ಸಂಘಟನೆಯ 5 ಜನರ ತಂಡವೊಂದು ತಮಿಳುನಾಡು ಪ್ರವೇಶಿಸಿದ್ದಾರೆ. ಅದರಲ್ಲಿ ಒರ್ವ ಪಾಕಿಸ್ತಾನದ ಉಗ್ರನಾಗಿದ್ದು, ತಮಿಳುನಾಡಿನಿಂದ ತಪ್ಪಿಸಿಕೊಂಡು ಕರಾವಳಿ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇವರು ಭಾರತದ ಮೇಲೆ ವಿದ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಮಲ್ಪೆ ಹಾಗೂ ಕರಾವಳಿಯ ಕಡಲ ತೀರ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.
ಕರಾವಳಿ ತೀರಾ ಪ್ರದೇಶಗಳಲ್ಲಿ ಈ ಬಗ್ಗೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಇಲಾಖೆಗೆ ಕೂಡಲೇ ತಿಳಿಸಿ ಎಂದು ಉಡುಪಿ ಎಸ್ಪಿ ನಿಶಾ ಜೇಮ್ಸ್ ಹೇಳಿದ್ದಾರೆ. ಜೊತೆಗೆ ಉಡುಪಿ ಠಾಣೆಯ ಹಾಗೂ ಕರಾವಳಿ ಕಾವಲು ಪೊಲೀಸ್ ಉಡುಪಿ ಇದರ ಉಚಿತ ಸಹಾಯವಾಣಿ ನಂಬರ್ 1093, 0820-2538299 ಈ ನಂಬರಿಗೆ ಕರೆ ಮಾಡುವಂತೆ ಪ್ರಕಟಣೆ ಹೊರಡಿಸಿದೆ.