ಕಾಸರಗೋಡು, ಆ 25 (DaijiworldNews/SM): ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಮೇಲಿನ ದಾಳಿ ಹಾಗೂ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಪ್ರತಿಭಟಿಸಿ ಕಾಸರಗೋಡು ವಲಯ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಆದಿತ್ಯವಾರ ಸಂಜೆ ಬೃಹತ್ ಪ್ರತಿಭಟನೆ ನಡೆಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿ ಪರಿಸರದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಮಂಜೇಶ್ವರ ಚರ್ಚ್ ಮುಂಭಾಗದ ರಸ್ತೆಯಲ್ಲಿ ಸಾಗಿ ಹೊಸಂಗಡಿ ಜಂಕ್ಷನ್ ನಲ್ಲಿ ಕೊನೆಗೊಂಡಿತು. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶೀಘ್ರವೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಅಲ್ಲದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂಬ ಎಚ್ಚರಿಕೆ ಪ್ರತಿಭಟನಾಕಾರರು ನೀಡಿದರು.
ಕಾಸರಗೋಡು ವಲಯ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್ ಜೋನ್ ವಾಸ್, ಕಾಸರಗೋಡು ಕೋಟೆಕಣಿ ಚರ್ಚ್ ನ ಧರ್ಮಗುರು ಫಾದರ್ ಮಾಣಿ ಮೇಲ್ವಟ್ಟಂ, ಕ್ಯಾಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ರೋಲ್ಫಿ ಡಿ ಕೋಸ್ಟಾ, ಕಾರ್ಯದರ್ಶಿ ನವೀನ್ ಬ್ರಾಗ್ಸ್, ತಲಶ್ಯೆರಿಯ ಫಾದರ್ ಮನೋಜ್, ಸ್ನೇಹಾಲಯದ ಜೋಸೆಫ್ ಕ್ರಾಸ್ತ, ನ್ಯಾಯವಾದಿ ಎಂ.ಎಸ್. ಥೋಮಸ್ ಡಿ ಸೋಜ, ಜೀನ್ ಲವೀನಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮಗುರುಗಳಾದ ಫಾದರ್ ಜೆ . ಬಿ ಮೊರಾಸ್, ಫಾದರ್ ಡೇನಿಯಲ್, ಫಾದರ್ ಫ್ರಾನ್ಸಿಸ್ ರೊಡ್ರಿಗಸ್, ಫಾದರ್ ವಲೇರಿಯನ್, ಫಾದರ್ ಪೌಲ್, ಫಾದರ್ ಅಗೋಸ್ಟಿನ್, ಫಾದರ್ ಮೆಲ್ವಿನ್ ಲೋಬೊ, ಫಾದರ್ ಸಂತೋಷ್, ಫಾದರ್ ಅನಿಲ್ ಡಿ ಸೋಜ ಈ ಸಂದರ್ಭ ಉಪಸ್ಥಿತರಿದ್ದರು.
ತಲಶ್ಯೆರಿಯ ಫಾದರ್ ಮನೋಜ್ ರವರು ಮಣ್ಣಿನಿಂದ ಯೇಸು ಕ್ರಿಸ್ತರ ಚಿತ್ರವನ್ನು ಬಿಡಿಸುವ ಮೂಲಕ ಗಮನ ಸೆಳೆದರು. ಹೊಸಂಗಡಿ ಪೇಟೆಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಕ್ಯಾಥೋಲಿಕ್ ಸಭಾ ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ರಾಜು ಸ್ಟೀಫನ್ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು.