ಕಾಸರಗೋಡು, ಆ 26(DaijiworldNews/SM): ಮಂಜೇಶ್ವರ ಚರ್ಚ್ ದಾಳಿ ಪ್ರಕರಣ ನಡೆದು ವಾರ ಕಳೆದರೂ ಇದುವರೆಗೆ ಆರೋಪಿಗಳನ್ನು ಬಂಧಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದರೂ, ಆರೋಪಿಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಈ ನಡುವೆ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಮಂಜೇಶ್ವರ ಚರ್ಚ್ ಗೆ ಭೇಟಿಯನ್ನು ನೀಡಿದ್ದಾರೆ. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇರಳ ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲಾಗುವುದು ಎಂದರು. ಅಲ್ಲದೆ ಆಗಸ್ಟ್ ೨೬ರ ಸೋಮವಾರದಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಇನ್ನು ಈಗಾಗಲೇ ಘಟನೆ ಖಂಡಿಸಿ ಮಂಜೇಶ್ವರದಲ್ಲಿ ಕ್ರೈಸ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳ ಬಂಧನವಾಗದಿದ್ದಲ್ಲಿ, ಉಗ್ರ ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.