ಮಂಗಳೂರು, ಆ.26(Daijiworld News/SS): ಶಿರಾಡಿ ಘಾಟಿಯಲ್ಲಿ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ. ಆ.8ರಿಂದ ಸುಬ್ರಹ್ಮಣ್ಯ ರೋಡ್ -ಸಕಲೇಶಪುರ ಮಧ್ಯೆ ಭೂಕುಸಿತ ಸಂಭವಿಸಿ ಮಂಗಳೂರು – ಬೆಂಗಳೂರು ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು.
ಇದೀಗ ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಘಾಟ್ ರೈಲು ಮಾರ್ಗ ದುರಸ್ತಿ ಪೂರ್ಣಗೊಂಡಿದ್ದು, ಮಂಗಳೂರು-ಬೆಂಗಳೂರು ರೈಲು ಈ ಮಾರ್ಗದಲ್ಲಿ ಪುನರಾರಂಭಗೊಳ್ಳಲಿದೆ. ಕುಲಶೇಖರ-ಪಡೀಲ್ ನಡುವೆ ಗುಡ್ಡಕುಸಿತದಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬಯಿ ರೈಲು ಮಾರ್ಗ ದುರಸ್ತಿ ಕೂಡ ಮುಕ್ತಾಯ ಹಂತದಲ್ಲಿದ್ದು, ಆ.26ರಂದು ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್ ಸಿರಿಬಾಗಿಲಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ದುರಸ್ತಿ ಕಾಮಗಾರಿ ಹಳಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಪ್ರಯಾಣಿಕರ ರೈಲು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.
ದುರಸ್ತಿಗೊಂಡ ಮಾರ್ಗದ ಸುರಕ್ಷತೆ ಖಾತರಿಪಡಿಸಿಕೊಳ್ಳಲು ಶನಿವಾರ ಒಂದು ಪ್ರಾಯೋಗಿಕ ರೈಲು ಸಂಚಾರ ಹಾಗೂ ಭಾನುವಾರ ರಾತ್ರಿ ಒಂದು ಗೂಡ್ಸ್ ರೈಲು ಈ ಮಾರ್ಗ ಸಂಚರಿಸಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಕಲ್ಲು ಮಣ್ಣು ತೆರವು ಕಾರ್ಯಾಚರಣೆಯನ್ನು ನೂರಾರು ಕಾರ್ಮಿಕರು ಮತ್ತು ಯಂತ್ರಗಳನ್ನು ಬಳಸಿ ನಡೆಸಲಾಗಿತ್ತು.