ಸುಳ್ಯ, ಆ.26(Daijiworld News/SS): ಸುಳ್ಯದ ಹಿರಿಯ ಪತ್ರಕರ್ತರಾಗಿದ್ದ ಚಂದ್ರೇಶ್ ಗೋರಡ್ಕರವರು (48) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾದ ಅವರನ್ನು ತಿಂಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ 3 ವಾರಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರನ್ನು, ಲಿವರ್ ಡ್ಯಾಮೇಜ್ ಹಾಗೂ ಕಿಡ್ನಿ ವೈಫಲ್ಯಗೊಂಡಿದ್ದುದರಿಂದ ವೈದ್ಯರ ಸಲಹೆ ಮೇರೆಗೆ ವಾರದ ಹಿಂದೆ ಹಿಂತಿರುಗಿ ಕರೆತಂದು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರೇಶ್ ಗೋರಡ್ಕರವರು ಮೃತಪಟ್ಟಿದ್ದಾರೆ.
ಚಂದ್ರೇಶ್'ರವರು ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಪಯಸ್ವಿನಿ ಪತ್ರಿಕೆ ಸಂಪಾದಕರಾಗಿ, ಬಳಿಕ ಸುಳ್ಯದಲ್ಲಿದ್ದ ಶ್ರೀ ಚಾನೆಲ್ ಕಾರ್ಯನಿರ್ವಾಹಕರಾಗಿ ದುಡಿದಿದ್ದರು. ಮಾತ್ರವಲ್ಲ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ವಿಶೇಷವೆಂದರೆ, ಅವರ ಪತ್ರಿಕಾ ಸೇವೆಯನ್ನು ಗುರುತಿಸಿ ಕಳೆದ ಜುಲೈ ತಿಂಗಳಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಂದರ್ಭ ಪತ್ರಕರ್ತರ ಸಂಘ ಅವರನ್ನು ಸನ್ಮಾನಿಸಿತ್ತು. ಕೆಲವು ವರ್ಷಗಳಿಂದ ಪತ್ರಿಕಾ ವೃತ್ತಿಯಿಂದ ದೂರವಾಗಿ ಬೇರೆ ವೃತ್ತಿ ಮಾಡುತ್ತಿದ್ದರು. ಪುಸ್ತಕ ವ್ಯಾಪಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅವರು ಅಗಲಿದ್ದಾರೆ.