ಉಡುಪಿ, ಆ 26 (Daijiworld News/MSP): ಪ್ರತಿವರ್ಷದಂತೆ ಕೃಷ್ಣ ಜನ್ಮಾಷ್ಟಮಿಯ ದಿನ ವಿಭಿನ್ನ ವೇಷ ಹಾಕಿ ನಿಧಿ ಸಂಗ್ರಹಿಸಿ, ಬಡ ಆರ್ಥಿಕ ನೆರವು ನೀಡುವ ಕಲಾವಿದ ರವಿ ಕಟಪಾಡಿ ಹಾಗೂ ಉಡುಪಿಯ ರಾಮಾಂಜಿಯವರು ಶ್ರೀ ಕೃಷ್ಣಾ ಜನ್ಮಾಷ್ಟಮಿಯಂದು ಈ ಬಾರಿ ವಿಭಿನ್ನ ಶೈಲಿಯ ವೇಷಧರಿಸಿ, ಬಡ ಮಕ್ಕಳಿಗಾಗಿ ಸಹಾಯಹಸ್ತ ಚಾಚಿದ್ದಾರೆ.
ಒಬ್ಬ ಸಾಮಾನ್ಯ ಕಾರ್ಮಿಕನಾಗಿರುವ ರವಿ ಕಟಪಾಡಿಯವರು ಕಳೆದ ಐದು ವರ್ಷಗಳಿಂದ ನಿರಂತರ ಅಷ್ಟಮಿಯಂದು ವೇಷ ಧರಿಸಿ ಸುಮಾರು ಹದಿನೆಂಟು ಮಕ್ಕಳಿಗೆ ಸುಮಾರು ರೂ 36 ಲಕ್ಷ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಆನಾರೋಗ್ಯ ಪೀಡಿತ ಮಕ್ಕಳ ವೈದ್ಯಕೀಯ ವೆಚ್ಚ ಹಾಗೂ ಚಿಕಿತ್ಸೆಗೆ ಹಣದ ಸಹಾಯ ಮಾಡಿದ್ದಾರೆ. ಕಳೆದ ನಾಲ್ಕು ವರ್ಷ ಇಂಗ್ಲಿಷ್ ಚಿತ್ರದ ಪಾತ್ರ ಮಾಡಿ ಜನರನ್ನು ರಂಜಿಸಿದ್ದು, ಈ ಬಾರಿ, ದಿ ವ್ಯಾಂಪಿಯರ್ ವೇಷ ಧರಿಸಿದ್ದರು. ಅದೇ ರೀತಿ ಈ ಬಾರಿ ಮೂರು ಮಕ್ಕಳಿಗೆ ಆರ್ಥಿಕ ಸಹಾಯ ಮಾಡಲಿದ್ದಾರೆ.
ಈ ಬಾರಿ ಸಂಗ್ರಹವಾದ ಹಣವನ್ನು ಲಿವರ್ ಕ್ಯಾನರ್ ನಿಂದದ ಬಳಲುತ್ತಿರುವ ಮೂಡುಬಾರಳಿಯ ಮಂದರ್ತಿಯ ಕುಶಲ ಹಾಗೂ ಉಷಾ ದಂಪತಿ ಪುತ್ರ ಶ್ರೀತನ್ ಚಿಕಿತ್ಸೆಗೆ, ಬಿಳಿ ರಕ್ತಕಣ ಸಮಸ್ಯೆ ಇರುವ ಕಳ್ಳಿಗುಡ್ಡೆ ವಕ್ವಾಡಿಯ ರವೀಂದ್ರ ಯಶೋಧ ದಂಪತಿ ಪುತ್ರ ಪ್ರಥಮ್ ಗೆ , ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿರುವ ಪಂಚಬೆಟ್ಟು ಹಿರಿಯಡಕ ಕೃಷ್ಣಮೂರ್ತಿ ಆಚಾರ್ಯ, ಕುಶಲ ದಂಪತಿ ಪುತ್ರ ಕಿರಣ್ ಸೇರಿದಂತೆ 5 ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ.
ಮೂರು ವರ್ಷದ ಶ್ರೀತನ್ ಚಿಕಿತ್ಸೆಗೆ ಸು. 7 ಲಕ್ಷ ರೂಪಾಯಿಗಳಷ್ಟು ಹಣದ ಅಗತ್ಯವಿದ್ದರೆ, ಕಳ್ಳಿಗುಡ್ಡೆಯ5 ವರ್ಷದ ಪ್ರಥಮ್ , ಪ್ರತಿ ತಿಂಗಳು ರೂ 20,000 ದಷ್ಟು ವೈದ್ಯಕೀಯ ಖರ್ಚು ಇದೆ. ಹಿರಿಯಡ್ಕದ ಪಂಚನ ಬೆಟ್ಟುವಿನ, 18 ವರ್ಷದ ಕಿರಣ್ 20 ಲಕ್ಷ ಅಗತ್ಯವಿದೆ. ಇವರೆಲ್ಲರ ಕಷ್ಟಕ್ಕೆ ತಮ್ಮಿಂದಾದ ಹಣದ ಸಹಾಯ ಮಾಡಲು ರವಿ ಮತ್ತು ರವಿ ಫ್ರೆಂಡ್ಸ್ ಬಳಗ ಕಟಪಾಡಿ ಇವರು ಉಡುಪಿ ನಗರದೆಲ್ಲಡೆ ಸಂಚರಿಸಿ ದೇಣಿಗೆಯನ್ನು ಸಂಗ್ರಹಿಸಿದ್ದಾರೆ.
ಕಲಾವಿದ ರಾಮಾಂಜಿ
ರವಿ ಕಟಪಾಡಿಯವರಂತೆಯೇ , ರಂಗ ಕಲಾವಿದ, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಂತಹ, ಸದಾ ಅಸಹಾಯಕ ಬಡ ಮಕ್ಕಳಿಗೆ ಸಹಾಯ ಮಾಡಬೇಕೆಂದು ಮಿಡಿಯುವ ಹೃದಯ ಉಡುಪಿಯ ರಾಮಂಜಿಯದು. ಇವರು ಕೂಡಾ ಅಷ್ಟಮಿಯಂದು ವೇಷ ಹಾಕಿ ದೇಣಿಗೆ ಸಂಗ್ರಹಿಸಿ ಬಡ ಮಗುವಿನ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾರೆ. ಇವರು ಸತತ ಏಳನೇ ವರ್ಷದಿಂದ ಈ ಸೇವೆ ಮಾಡುತ್ತಿದ್ದಾರೆ. ಕಳೆದ ಬಾರಿ ನಾಗ ಸಾಧು, ಮಯಾನ್ ಸಂಸ್ಕೃತಿಯ ಬುಡಕಟ್ಟು ಜನಾಂಗ, ಕೇರಳದ ತಯ್ಯಂ, ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗದ ಆಪಕಲಿಪ್ಡೊ, ಮಾರಿಕಾಡು ವೇಷಗಳನ್ನು ಅಷ್ಟಮಿಯ ಸಂದರ್ಭದಲ್ಲಿ ಧರಿಸಿ ಸಾರ್ವಜನಿಕರು ನೀಡಿದ ಹಣವನ್ನ ಆರ್ಥಿಕ ಕಷ್ಟ ದಲ್ಲಿರುವ ಮಕ್ಕಳಿಗೆ ನೀಡಿ ಅವರ ಬದುಕಿಗೆ ಆಶಾ ಕಿರಣವಾಗಿದ್ದಾನೆ.
ಈ ಬಾರಿ ಕುಂದಾಪುರ ತಾಲೂಕಿನ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಸೋನಿಯಾ, ಮೆದುಳು ಗೆಡ್ಡೆ ಶಸ್ತ್ರಚಿಕಿತ್ಸೆ ಚಿಕಿತ್ಸೆಯನ್ನು ಮಾಡಿಸಲು ಹಣದ ನೆರವು ನೀಡಲು ಮುಂದಾಗಿದ್ದಾರೆ. ಈ ಚಿಕಿತ್ಸೆಗೆ ಅಂದಾಜು ವೆಚ್ಚ ರೂ. 7 ಲಕ್ಷ ತಗುಲಿದೆ. ಉದಾರಿಗಳು ಸೋನಿಯಾ ಭವಿಷ್ಯದ ದೃಷ್ಟಿಯಿಂದ, ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಕೋರಿದ್ದಾನೆ.
ಅದಕ್ಕಾಗಿಯೇ ಈ ಸಲ, ಎರಡು ದಿನ ಜನರನ್ನು ಮನರಂಜಿಸಲು "ಸ್ನೇಕ್ ಕ್ವೀನ್" ಎಂಬ ವಿಭಿನ್ನ ವೇಷ ಧರಿಸಿ ನಗರದೆಲ್ಲಡ ಸಂಚರಿಸಿ ಉದಾರಿಗಳಿಂದ ಆರ್ಥಿಕ ನೆರವು ಕೋರಿದ್ದಾನೆ. ರಾಮಾಂಜಿಯ ಗೆಳೆಯರ ಬಳಗ ಆತನ ಸದುದ್ದೇಶಕ್ಕೆ ಸಾಥ್ ಕೊಟ್ಟು ನಿಂತಿದೆ.
ಹಣ ಎಲ್ಲರ ಬಳಿಯೂ ಇರುವುದಿಲ್ಲ. ಸಾಮಾಜಮುಖಿ ಕೆಲಸ ಮಾಡಲು ಮೊದಲು ನೋವಿಗೆ ಮಿಡಿಯುವ ಹೃದಯ ಬೇಕು. ಆಗ ಮಾತ್ರ ಅಗತ್ಯವಿರುವ ಬಡಜನರಿಗೆ ಸಹಾಯ ಮಾಡಲು ಸಾಧ್ಯ. ಅಂತಹ ಸಮಾಜಸೇವೆಯಲ್ಲಿ ತೊಡಗಿರುವವರು ಇವರಿಬ್ಬರಿಬ್ಬರೂ ನಿಜಕ್ಕೂ ಗ್ರೇಟ್.