ಮಂಗಳೂರು, ಆ.26(Daijiworld News/SS): ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ವಿತರಣೆ ಮಾಡಲಾಯಿತು.
ನಗರದ ಮಿನಿ ವಿಧಾನ ಸೌಧದ ಬಳಿಯ ಎನ್ಜಿಒ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಳೆ-ನೆರೆ ನೀರು ಮನೆಗೆ ನುಗ್ಗಿ ಹಾನಿಗೊಳಗಾದ 214 ಸಂತ್ರಸ್ತರಿಗೆ ತಲಾ 10 ಸಾವಿರ ರೂ. ಮತ್ತು ಭಾಗಶಃ ಮನೆ ಹಾನಿಗೊಳಗಾದ 5 ಮಂದಿಗೆ ತಲಾ 95 ಸಾವಿರ ರೂ. ಮೊತ್ತದ ಚೆಕ್ಕನ್ನು ಹಸ್ತಾಂತರಿಸಲಾಗಿದೆ.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಭಾಗಶಃ ಮನೆ ಹಾನಿಗೊಳಗಾದ 5 ಸಂತ್ರಸ್ತರನ್ನು ಗುರುತಿಸಲಾಗಿದೆ. ಅವರಿಗೆ ಕೇವಲ 25ರಿಂದ 40 ಸಾವಿರ ರೂ. ಮೊತ್ತದೊಳಗೆ ಪರಿಹಾರ ನೀಡಲಾಗುತ್ತಿತ್ತು. ಇದೀಗ 1 ಲಕ್ಷ ರೂ. ನೀಡಲಾಗುತ್ತಿದೆ ಎಂದು ಹೇಳಿದರು.
ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 14 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಆ ಪೈಕಿ ಜಪ್ಪಿನಮೊಗರಿನ 9 ಕುಟುಂಬಗಳಿಗೆ ಅಲ್ಲಿ ವಾಸ ಮಾಡಲು ಅಸಾಧ್ಯವಾಗಿದೆ. ಅವರಿಗೆ ಹೊಸ ನಿವೇಶನ ಸಹಿತ ಮನೆ ನಿರ್ಮಿಸಲು ತಲಾ 5 ಲಕ್ಷ ರೂ. ನೀಡುವ ಯೋಜನೆ ರೂಪಿಸಲಾಗಿದೆ. ಅವರ ಮನೆ ಬಾಡಿಗೆಯಾಗಿ ಮಾಸಿಕ 5 ಸಾವಿರ ರೂ.ನಂತೆ 1 ವರ್ಷದವರೆಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಹಿಂದೆ ಮಳೆ-ನೆರೆ ಸಂತ್ರಸ್ತರಿಗೆ ಕೇವಲ 3,800 ರೂ. ಪಾವತಿಸಲಾಗುತ್ತಿತ್ತು. ಆದರೆ, ಈ ಬಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಅಸ್ಥೆ ವಹಿಸಿ ರಾಜ್ಯಾದ್ಯಂತ ಎಲ್ಲಾ ಸಂತ್ರಸ್ತರಿಗೆ 10 ಸಾವಿರ ರೂ. ಮೊತ್ತವನ್ನು ನೀಡಲು ಆದೇಶಿಸಿದ್ದರು. ಅದರಂತೆ ನಾಲ್ಕು ದಿನ ತಡವಾದರೂ ಕೂಡ ದಕ್ಷಿಣ ವಿಧಾನ ಸಭಾ ಕ್ಷೇತ್ರದ 214 ಸಂತ್ರಸ್ತರಿಗೆ ಪರಿಹಾರದ ಧನದ ಚೆಕ್ ವಿತರಿಸಿದ್ದೇವೆ. ಇನ್ನೂ ಪರಿಹಾರದ ಧನ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳದವರು ತನ್ನನ್ನು ಅಥವಾ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಕಳೆದ ಬಾರಿ 1.89 ಕೋ.ರೂ. ವೆಚ್ಚದಲ್ಲಿ ಎಲ್ಲಾ ರಾಜಕಾಲುವೆಯ ಹೂಳೆತ್ತಿದ ಕಾರಣ ಈ ಬಾರಿ ನಗರದಲ್ಲಿ ಹೆಚ್ಚು ನೀರು ತುಂಬಿರಲಿಲ್ಲ. ಆದರೆ, ನದಿ ತೀರದ ತಗ್ಗು ಪ್ರದೇಶಗಳಾದ ಜಪ್ಪಿನಮೊಗರು, ಬಜಾಲ್, ಬೋಳೂರು, ಕಸಬಾ ಬೆಂಗರೆ, ಕೂಳೂರು, ಬಂಗ್ರಕೂಳೂರುಗಳಲ್ಲಿನ ಮನೆಗಳಿಗೆ ನೀರು ತುಂಬಿದ ಕಾರಣ ಅಪಾರ ಹಾನಿಯಾಗಿದೆ ಎಂದು ಹೇಳಿದರು.